ಬೆಂಗಳೂರು:ಸೈನಿಕರಿಗಾಗಿ ಭವನ ನಿರ್ಮಾಣಕ್ಕೆ ಐದು ಕೋಟಿ ರೂಪಾಯಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.
ವಿಧಾನಸೌಧದ ಬಾಂಕ್ವೆಟ್ ಹಾಲ್ನಲ್ಲಿ ನಡೆದ ಸಶಸ್ತ್ರ ಪಡೆಯ ಧ್ವಜ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸೈನಿಕರಿಗಾಗಿ ಭವನ ನಿರ್ಮಿಸಲು ಒಂದು ಎಕರೆ ಜಾಗ ನೀಡಲು ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಶೀಘ್ರದಲ್ಲೇ ಸೈನಿಕರು, ಮಾಜಿ ಸೈನಿಕರ ಜೊತೆ ಸಭೆ ನಡೆಸಲಾಗುತ್ತದೆ ಎಂದರು.
ಜೊತೆಗೆ ಸೈನಿಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ಕ್ರಮ ವಹಿಸಲಾಗುತ್ತದೆ. ಅದು ನಮ್ಮ ಕರ್ತವ್ಯವಾಗಿದೆ. ಮುಂದಿನ ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿಗೆ ಸೈನಿಕರನ್ನು ಸಹ ಪರಿಗಣಿಸುತ್ತೇವೆ ಎಂದು ಸಿಎಂ ಇದೇ ವೇಳೆ ಘೋಷಿಸಿದ್ರು.
ಇದೇ ವೇಳೆ ಸಿಎಂ ಧ್ವಜ ದಿನಾಚರಣೆಯ ಧ್ವಜಗಳನ್ನು ಬಿಡುಗಡೆಗೊಳಿಸಿದರು. ಧ್ವಜ ನಿಧಿ ಸಂಗ್ರಹಿಸಿದ ವಿವಿಧ ಜಿಲ್ಲೆ ಮತ್ತು ಸಂಸ್ಥೆಗಳಿಗೆ ಪ್ರೋತ್ಸಾಹಕ ಪಾರಿತೋಷಕ ವಿತರಿಸಿದರು. ನಂತರ ಯುದ್ಧದಲ್ಲಿ ಮಡಿದ ವೀರ ಯೋಧರ ಕುಟುಂಬಕ್ಕೆ ಗೌರವ ಸಮರ್ಪಣೆ ಮಾಡಿದರು. ದಿವಂಗತ ಸ್ಯಾಪರ್ ಪ್ರಕಾಶ್ ಜಾಧವ್ ಪತ್ನಿ ರಾಣಿ ಪ್ರಕಾಶ್ ಜಾಧವ್ ಅವರಿಗೆ ನೆನಪಿನ ಕಾಣಿಗೆ ನೀಡಿ ಗೌರವಿಸಿದರು.