ಬೆಂಗಳೂರು:ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಕಾವೇರಿ ನಿವಾಸದಲ್ಲಿ ಸಚಿವರ ಜೊತೆ ಭೋಜನ ಕೂಟ ಏರ್ಪಡಿಸಿದ್ದು, ಕುತೂಹಲ ಕೆರಳಿಸಿದೆ.
ಬಹಳ ದಿನಗಳ ಬಳಿಕ ಸಂಪುಟ ಸಚಿವರ ಜೊತೆ ಸಿಎಂ ಲಂಚ್ ಮೀಟಿಂಗ್ಗೆ ಮುಂದಾಗಿದ್ದು, ಪ್ರಸಕ್ತ ರಾಜಕೀಯ ವಿದ್ಯಾಮಾನಗಳು, ಇಲಾಖೆಗಳ ಕಾರ್ಯವೈಖರಿ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಲಂಚ್ ಮೀಟಿಂಗ್ ಮೂಲಕ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಿಎಂ ಯತ್ನಿಸಿದ್ದಾರೆ ಎನ್ನಲಾಗ್ತಿದೆ.
ಇನ್ನು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿರುವ ವೇಳೆ ಸಿಎಂ ಲಂಚ್ ಮೀಟಿಂಗ್ ನಡೆಸಿರುವುದು ಕುತೂಹಲ ಕೆರಳಿಸಿದೆ. ಸಂಪುಟ ಪುನಾರಚನೆಯಾದರೆ ಕೆಲವರನ್ನು ಕೈ ಬಿಡಲಾಗುವುದೆಂಬ ಮಾತು ಕೇಳಿ ಬರುತ್ತಿದೆ. ಸಂಪುಟ ಕಸರತ್ತಿಗೂ ಮುನ್ನ ಸಚಿವರ ವಿಶ್ವಾಸ ಗಳಿಸಲು ಈ ಮೂಲಕ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.