ಬೆಂಗಳೂರು: ಮುಂದಿನ 5-6 ದಿನಗಳ ಮಳೆ ಹಾಗೂ ಮಳೆ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. ಇದನ್ನು ಗಮನಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗೆ ಸನ್ನದ್ಧರಾಗಬೇಕು ಎಂದು ಮಳೆ ಹಾನಿಗೊಳಗಾದ ಜಿಲ್ಲಾಡಳಿತಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಮಳೆಯಿಂದ ಹಾನಿಗೊಳಗಾಗಿರುವ ಜಿಲ್ಲೆಗಳಲ್ಲಿನ ಸ್ಥಿತಿಗತಿ ಹಾಗೂ ಪರಿಹಾರ ಕಾರ್ಯಗಳ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಮನೆಗಳಿಗೆ ತುರ್ತು ಪರಿಹಾರ 10 ಸಾವಿರ ರೂ.ಗಳನ್ನು ನೀಡಿ ನಂತರ ಮನೆಗಳ ನಿರ್ಮಾಣವನ್ನು ಕೂಡಲೇ ಕೈಗೊಳ್ಳಬೇಕು. ರಸ್ತೆ, ಸೇತುವೆ ವಿದ್ಯುತ್ ಮುಂತಾದ ಮೂಲ ಸೌಕರ್ಯ ದುರಸ್ತಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಮಹಾರಾಷ್ಟ್ರದ ಕೋಯ್ನಾ ಜಲಾಶಯಗಳಿಂದ ನೀರಿನ ಮಟ್ಟದ ಬಗ್ಗೆ ನಿಗಾ ವಹಿಸಲು ಅಲ್ಲಿನ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಬೇಕು. ಜಲಾಶಯಗಳಿಂದ ನೀರು ಹೊರಬಿಡುವ ಮುನ್ನ ಗ್ರಾಮಗಳಿಗೆ ಎಚ್ಚರಿಕೆ ನೀಡಿ ಜೀವ ಹಾನಿ ಅಥವಾ ಮನೆಗಳಿಗೆ ತೊಂದರೆಯಾಗದಂತೆ ಮುನ್ನಚ್ಚರಿಕೆ ವಹಿಸುವುದು. ಜನರ ಸ್ಥಳಾಂತರಕ್ಕೆ ಕ್ರಮ ವಹಿಸಬೇಕು.
ಎನ್ಡಿಆರ್ಎಫ್ ಮಾರ್ಗಸೂಚಿಗಳ ಪ್ರಕಾರ, ಹಾನಿಗೊಳಗಾಗಿರುವ ಮನೆಗಳ ನಿರ್ಮಾಣಕ್ಕೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಪ್ರವಾಹ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಪರಿಹಾರ ಒದಗಿಸಬೇಕು. ಬೆಳೆ ಹಾನಿ, ರಸ್ತೆ, ಮನೆಗಳ ಹಾನಿ ಬಗ್ಗೆ ಸಮೀಕ್ಷೆ ಸರಿಯಾಗಿ ಆಗಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ಜಿಲ್ಲೆಗಳಲ್ಲಿ ಮುಂದಿನ 5-6 ದಿನಗಳ ಮಳೆ ಹಾಗೂ ಮಳೆ ಮುನ್ಸೂಚನೆಯನ್ನು ಗಮನಿಸಿ ಮುನ್ನೆಚ್ಚರಿಕಾ ಕ್ರಮಗಳ ಜೊತೆಗೆ ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗೆ ಸನ್ನದ್ಧರಾಗಬೇಕು. ಪರಿಹಾರ ಕಾರ್ಯಗಳು ತ್ವರಿತ ಹಾಗೂ ಪಾರದರ್ಶಕವಾಗಿರಬೇಕು.
ರಸ್ತೆ ಸಂಪರ್ಕ, ವಿದ್ಯುತ್ ಕಂಬಗಳು ಹಾಗೂ ಕುಡಿಯುವ ನೀರಿನ ಸರಬರಾಜಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಮಳೆಯಿಂದ ಉಂಟಾಗಿರುವ ಹಾನಿಯ ಕುರಿತು ಜಂಟಿ ಸಮೀಕ್ಷೆ ನಡೆಸಿ ವ್ಯವಸ್ಥಿತವಾಗಿ ಪರಿಹಾರವನ್ನು ತಕ್ಷಣವೇ ಒದಗಿಸಲು ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಅಹವಾಲುಗಳಿಗೆ ಸ್ಪಂದಿಸಬೇಕು: ಭೂಕುಸಿತದ ಸಾಧ್ಯತೆಗಳುಳ್ಳ ಪ್ರದೇಶಗಳಲ್ಲಿ ರಸ್ತೆಗಳನ್ನು ತೆರವುಗೊಳಿಸುವುದು ಹಾಗೂ ದುರ್ಬಲ ಪ್ರದೇಶಗಳ ಸಮೀಕ್ಷೆ ಕಾರ್ಯ ಕೈಗೊಳ್ಳಲು ತಂಡಗಳನ್ನು ನಿಯೋಜಿಸಬೇಕು ಹಾಗೂ ಕೂಡಲೇ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಕ್ಕೆ ಕ್ರಮ ವಹಿಸಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಬೇಕು.
ಸಮಿತಿಯು ಸಮೀಕ್ಷೆ ಕೈಗೊಂಡು ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲಾ ನಿಯಂತ್ರಣಾ ಕೊಠಡಿಗಳು ಭಾರಿ ಮಳೆ ಹಾಗೂ ಪ್ರವಾಹ ಸ್ಥಿತಿಯ ಕುರಿತ ಅಹವಾಲುಗಳಿಗೆ ಸ್ಪಂದಿಸಬೇಕು ಎಂದರು.
ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ತಂಡಗಳಿಗೆ ಅಗತ್ಯವಿರುವ ಲಾಜಿಸ್ಟಿಕ್ಸ್ ನೆರವನ್ನು ಒದಗಿಸಿ ತೊಂದರೆಗೀಡಾದ ಪ್ರದೇಶಗಳಿಗೆ ತಕ್ಷಣವೇ ತಲುಪಲು ಕ್ರಮ ವಹಿಸಬೇಕು. ಜಿಲ್ಲಾ ರಕ್ಷಣಾಧಿಕಾರಿಗಳು ಮೇಲ್ವಿಚಾರಣೆ ಕೈಗೊಳ್ಳಬೇಕು. ಸಂಬಂಧಿಕರ ಮನೆಗಳಿಗೆ ತೆರಳಿರುವ ಸಂತ್ರಸ್ತರಿಗೆ ಪಡಿತರ ಕಿಟ್ ನ್ನು ಕಂದಾಯ ಇಲಾಖೆ ನೀಡುವ ಪಟ್ಟಿಯಂತೆ ಒದಗಿಸಬೇಕು.
ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು : ವಿದ್ಯುತ್ ಸಂಪರ್ಕ ಪುನಃಸ್ಥಾಪಿಸಲು ಅತಿ ಹೆಚ್ಚಿನ ಆದ್ಯತೆ ನೀಡಿ ಬಾಧಿತ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಒದಗಿಸಲು ಎಸ್ಕಾಂಗಳು ಶ್ರಮವಹಿಸಬೇಕು. ಜಿಲ್ಲಾಡಳಿತದ ವತಿಯಿಂದ ಹಾನಿಯಾಗಿರುವ ರಸ್ತೆ, ಸೇತುವೆ, ಕಲ್ವರ್ಟ್ ಹಾಗೂ ಟ್ಯಾಂಕ್ ಬಂಡ್ಗಳನ್ನು ತಾತ್ಕಾಲಿಕವಾಗಿ ತಕ್ಷಣವೇ ಸರಿಪಡಿಸಿ, ಶಾಶ್ವತ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದರು.
ಪ್ರಕೃತಿ ವಿಕೋಪ ಪರಿಹಾರದಡಿ ಕೈಗೊಂಡಿರುವ ಮನೆಗಳ ನಿರ್ಮಾಣ ಕಾರ್ಯವನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಬೇಕು. ಕಳೆದ ಮೂರು ವರ್ಷಗಳ ಅವಧಿಯ ಮನೆಗಳ ನಿರ್ಮಾಣ ಕಾರ್ಯ ಹಾಗೂ ಅವುಗಳನ್ನು ಪೂರ್ಣಗೊಳಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿಸ್ತೃತ ವರದಿ ಸಲ್ಲಿಸಬೇಕು.
ಬೆಳೆ ಹಾನಿ ಕುರಿತು ತನಿಖೆ ಕೈಗೊಂಡು ಒಂದು ತಿಂಗಳೊಳಗೆ ಇನ್ಪುಟ್ ಸಬ್ಸಿಡಿ ವಿತರಿಸಬೇಕು. ಕಾಳಜಿ ಕೇಂದ್ರಗಳಲ್ಲಿರುವ ಸಂತ್ರಸ್ತರಿಗೆ ಸರ್ಕಾರಿ ಆದೇಶದಲ್ಲಿ ನೀಡಿರುವ ಆಹಾರ ಪಟ್ಟಿಯನ್ನು ಅನುಸರಿಸಬೇಕು ಎಂದು ಜಿಲ್ಲಾಡಳಿತಗಳಿಗೆ ಸಿಎಂ ಸೂಚನೆ ನೀಡಿದರು.
ಓದಿ:ಜ್ವರಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದ ವ್ಯಕ್ತಿ ವೈದ್ಯರ ನಿರ್ಲಕ್ಷ್ಯದಿಂದ ಸಾವು ಆರೋಪ..