ಬೆಂಗಳೂರು:ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಭಾಗ್ಯ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಹಗರಣ ಹಾಗೂ ತ್ಯಾಜ್ಯ ವಿಲೇವಾರಿ ಕಾರ್ಯಗಳಲ್ಲಿನ ಹಗರಣಗಳ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸಿಎಂ ಯಡಿಯೂರಪ್ಪ ಆದೇಶಿಸಿದ್ದಾರೆ. ಅಲ್ಲದೆ, ಎರಡು ತಿಂಗಳೊಳಗೆ ಸಮಗ್ರ ವರದಿ ನೀಡುವಂತೆ ಸಿಎಂ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಕೃಷಿ ಭಾಗ್ಯ ಯೋಜನೆ ಅವ್ಯವಹಾರ ಆರೋಪ:
2014-15ರಲ್ಲಿ ಸಿದ್ದರಾಮಯ್ಯ ಸರ್ಕಾರ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿತ್ತು. 2014-15 ರಿಂದ 2017-18ರವರೆಗೆ 131 ತಾಲೂಕುಗಳ ವ್ಯಾಪ್ತಿಯಲ್ಲಿ 2,15,130 ಕೃಷಿ ಹೊಂಡಗಳನ್ನು ನಿರ್ಮಿಸಿರುವುದಾಗಿ ಕೃಷಿ ಅಧಿಕಾರಿಗಳು ತಿಳಿಸಿದ್ದರು. ಇದಕ್ಕಾಗಿ 921.16 ಕೋಟಿ ರೂ. ವೆಚ್ಚ ಮಾಡಿರುವ ಬಗ್ಗೆ ಅಧಿಕಾರಿಗಳು ದಾಖಲೆ ನೀಡಿದ್ದಾರೆ. ಆದರೆ ಅಧಿಕಾರಿಗಳು ಹೇಳಿರುವಷ್ಟು ಕೃಷಿ ಹೊಂಡಗಳು ನಿರ್ಮಾಣವಾಗಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಜೊತೆಗೆ ಯೋಜನೆಗೆ ನೀಡಲಾದ ಅನುದಾನದಲ್ಲಿ ವ್ಯಾಪಕ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿತ್ತು.
ಸಿಎಂ ಹೊರಡಿಸಿರುವ ಆದೇಶದ ಪ್ರತಿ ಈ ಹಿನ್ನೆಲೆ ತನಿಖೆಗೆ ಆದೇಶಿಸಿರುವ ಸಿಎಂ 131 ತಾಲೂಕುಗಳಲ್ಲಿ ನಿರ್ಮಿಸಲಾಗಿದೆ ಎನ್ನಲಾಗಿರುವ ಕೃಷಿ ಹೊಂಡ ಹಾಗೂ ಅದಕ್ಕೆ ಪೂರಕವಾಗಿ ಪೂರೈಸಲಾದ ಪಾಲಿಥಿನ್ ಹೊದಿಕೆ, ನೆರಳು ಪರದೆ, ಡೀಸೆಲ್ ಪಂಪ್ ಅಳವಡಿಕೆ ಕುರಿತು ಆಯಾ ಜಿಲ್ಲಾ ಕೃಷಿ ನಿರ್ದೇಶಕರು ಖುದ್ದು ಪರಿಶೀಲನಾ ವರದಿಯನ್ನು ಎರಡು ತಿಂಗಳಲ್ಲಿ ಸಲ್ಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಆದೇಶಿಸಿದ್ದಾರೆ.
ಏನಿದು ತ್ಯಾಜ್ಯ ವಿಲೇವಾರಿ ಹಗರಣ ಆರೋಪ:
ತ್ಯಾಜ್ಯ ವಿಲೇವಾರಿ ಕಾರ್ಯಗಳಲ್ಲಿ ನಡೆದಿರುವ ಹಗರಣಗಳ ಆರೋಪ ಬಗ್ಗೆಯೂ ಸಿಎಂ ತನಿಖೆಗೆ ಆದೇಶ ನೀಡಿದ್ದು, ಈ ಪೈಕಿ ವರ್ಷಕ್ಕೆ 1067 ಕೋಟಿ ಮೊತ್ತವನ್ನು ತ್ಯಾಜ್ಯ ವಿಲೇವಾರಿಗೆ ಬಳಕೆ ಮಾಡಲಾಗಿತ್ತು ಎನ್ನಲಾಗ್ತಿದೆ. ಈ ಬಗ್ಗೆಯೂ ತನಿಖೆಗೆ ಸೂಚಿಸಲಾಗಿದೆ. ಜೊತೆಗೆ 410 ಕೋಟಿ ವೆಚ್ಚದಲ್ಲಿ ಏಳು ಕಡೆ ನಿರ್ಮಿಸಲಾಗಿರುವ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕಗಳ ನಿರ್ಮಾಣದಲ್ಲಿನ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆಗೆ ನಿರ್ದೇಶನ ನೀಡಿದ್ದಾರೆ.
ಇನ್ನು 96 ಕೋಟಿ ಮೊತ್ತದ ತ್ಯಾಜ್ಯ ವಿಲೇವಾರಿ ವಾಹನಗಳ (Compactors & Mechanical Sweepers) ಖರೀದಿ ಮತ್ತು ನಿರ್ವಹಣಾ ಗುತ್ತಿಗೆ (TPS) ಹಗರಣ ಬಗ್ಗೆ ಹಾಗೂ ಬೆಳ್ಳಳ್ಳಿ, ಬಾಗಲೂರು ಮತ್ತು ಮಿಟ್ಟಗಾನಹಳ್ಳಿ ಕ್ವಾರಿಗಳಿಗೆ ಲೈನರ್ಗಳ ಅಳವಡಿಕೆ ಹೆಸರಿನಲ್ಲಿ ನಡೆದಿರುವ 109 ಕೋಟಿ ಹಗರಣ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.