ಬೆಂಗಳೂರು :ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬಹುಮತ ಸಾಬೀತುಪಡಿಸುತ್ತೇನೆಂಬ ಮಾತುಗಳನ್ನಾಡಿದ್ದಾರೆ. ಆದರೆ, ಬಹುಮತ ಸಾಬೀತುಪಡಿಸಲು ವಿಫಲರಾಗಿ ಮತ್ತೊಮ್ಮೆ ವಚನ ಭ್ರಷ್ಟರಾಗುತ್ತಾರೆ ಎಂದು ಕುಡಚಿ ಶಾಸಕ ಪಿ.ರಾಜೀವ್ ಭವಿಷ್ಯ ನುಡಿದಿದ್ದಾರೆ.
ಯಲಹಂಕದ ಹೊನ್ನೇನಹಳ್ಳಿಯ ರಮಡ ರೆಸಾರ್ಟ್‌ನಲ್ಲಿ ಶಾಸಕರ ಸಭೆಯಲ್ಲಿ ಪಾಲ್ಗೊಂಡು ಹೊರ ತೆರಳುವ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಲ್ಪಮತಕ್ಕೆ ಸರ್ಕಾರ ಇಳಿದಾಗ, ಬಹುಮತ ಸಾಬೀತುಪಡಿಸದ ಹೊರತು ಸದನ ನಡೆಸಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಬಹುಮತ ಸಾಬೀತು ಪಡಿಸುತ್ತೇನೆಂದು ಹೇಳಿರುವ ಮುಖ್ಯಮಂತ್ರಿಗಳು ಬಹುಮತ ಸಾಬೀತು ಪಡಿಸಲಾಗದೇ ಮತ್ತೊಮ್ಮೆ ವಚನ ಭ್ರಷ್ಟರಾಗುತ್ತಾರೆ ಎಂದರು.
ಮುಖ್ಯಮಂತ್ರಿಯವರು ವಿಶ್ವಾಸ ಮತಯಾಚನೆ ಮಾಡುತ್ತೇನೆ ಎಂದು ಹೇಳಿದ್ದೆ ದೊಡ್ಡ ವಿಷಯ ಎಂಬುದಾಗಿ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳು ಬಹುಮತವಿಲ್ಲದೆ ಯಾವುದೇ ಕಲಾಪ ನಡೆಸಲು ಸಾಧ್ಯವಿಲ್ಲ. ಹೀಗಾಗಿ, ಬಹುಮತ ಸಾಬೀತುಪಡಿಸಬೇಕಾದ ಅನಿವಾರ್ಯತೆ ಇದೆ ಎಂದರು.
ವಿರೋಧ ಪಕ್ಷ ಅವಿಶ್ವಾಸ ನಿರ್ಣಯ ಮಂಡಿಸಬೇಕು. ಆದರೆ, ಈ ಬಾರಿ ಅವಿಶ್ವಾಸ ನಿರ್ಣಯ ಮಂಡಿಸುವುದು ಬೇಡ. ಅವರು ಬಹುಮತ ಕಳೆದುಕೊಂಡಿರುವುದರಿಂದ ಅವರೇ ವಿಶ್ವಾಸ ನಿರ್ಣಯ ಮಾಡಿ ಸಾಬೀತುಪಡಿಸಲಿ ಎಂದು ನಮ್ಮ ನಾಯಕರೇ ಹೇಳಿದ್ದಾರೆ. ಪ್ರಸಕ್ತವಾಗಿ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಮೂರು ಜನ ಶಾಸಕರು ಈಗಾಗಲೇ ರಾಜೀನಾಮೆ ನೀಡಿರುವುದರಿಂದ ನಿಯಮ 29ರಡಿಯಲ್ಲಿ ಸದನದ ಒಪ್ಪಿಗೆ ಪಡೆಯಬೇಕಾಗುತ್ತದೆ. ಈಗ ಮೈತ್ರಿ ಸರ್ಕಾರಕ್ಕೆ ಅದು ಅನಿವಾರ್ಯವಾಗಿದೆ ಎಂದು ಹೇಳಿದರು.