ಬೆಂಗಳೂರು: ಸ್ಮಶಾನ ನೌಕರರನ್ನು ಸತ್ಯ ಹರಿಶ್ಚಂದ್ರ ಬಳಗ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಮಕರಣ ಮಾಡಿ, ಇನ್ಮುಂದೆ ಇವರನ್ನು ಸತ್ಯ ಹರಿಶ್ಚಂದ್ರ ಬಳಗ ಎಂದೇ ಕರೆಯಬೇಕು ಅಂತ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಜೊತೆಗೆ ಸೇವಾ ಖಾಯಂಮಾತಿಯ ಭರವಸೆ ನೀಡಿದ್ದಾರೆ. ಇಂದು ತಮ್ಮ ಅಧಿಕೃತ ನಿವಾಸದಲ್ಲಿ ಸ್ಮಶಾನ ಕಾರ್ಮಿಕರ ಜೊತೆ ಸಿಎಂ ಉಪಹಾರ ಸವಿದರು. ಈ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಉಪಸ್ಥಿತರಿದ್ದರು.
40 ಸಾವಿರ ಪೌರ ಕಾರ್ಮಿಕರ ಕಾಯಂಮಾತಿಗೆ ಚಿಂತನೆ.. ನಂತರ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ಸ್ಮಶಾನದಲ್ಲಿ ಕೆಲಸ ಮಾಡುವ ಓರ್ವ ವ್ಯಕ್ತಿ ಪ್ರಶಸ್ತಿ ಪಡೆದ. ಆಗ ಅವರನ್ನು ಕರೆದು ಮಾತನಾಡಿಸಿದೆ. ನಿಮಗೆ ಎಷ್ಟು ಸಂಬಳ ಬರುತ್ತದೆ ಅಂತ ವಿಚಾರಿಸಿದೆ. ಆಗ ಆತ ಸಂಬಳ ಅಲ್ಲ ಸರ್, ನಮ್ಮದು ನೌಕರಿನೇ ಅಲ್ಲ ಎಂದ. ಇದನ್ನು ಕೇಳಿ ನನಗೆ ಬಹಳ ನೋವಾಯಿತು. ಸಮಸ್ಯೆ ಕೇಳಿ ಅವರಿಗೆ ಒಂದು ಸೌಲಭ್ಯ ಕೊಡುವ ನಿರ್ಣಯ ಮಾಡಿದೆ. ಬೆಂಗಳೂರಿನಲ್ಲಿ 117 ಜನರಿಗೆ ಸೇವೆ ಖಾಯಂ ಮಾಡಿದ್ದೇವೆ. ಇನ್ನು ಉಳಿದ 30 ಜನರಿಗೆ ಖಾಯಂ ನೇಮಕಾತಿ ಆದೇಶ ಹೊರಡಿಸುತ್ತೇನೆ. 30 ಜನರದ್ದು ವಯಸ್ಸಿನ ಬಗ್ಗೆ ಚರ್ಚೆ ನಡೆಯುತ್ತಿದೆ. ಅದನ್ನು ಪರಿಶೀಲನೆ ಮಾಡುತ್ತೇವೆ. ಇತ್ತೀಚಿಗೆ ಪೌರ ಕಾರ್ಮಿಕರನ್ನು ಸಹ ಖಾಯಂ ಗೊಳಿಸಿದ್ದೇವೆ. 40 ಸಾವಿರ ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಚಿಂತನೆ ಇದೆ. ಅದನ್ನ ನಾವು ಮಾಡುತ್ತೇವೆ. ಈಗಾಗಲೇ 11 ಸಾವಿರ ಪೌರಕಾರ್ಮಿಕರನ್ನ ಖಾಯಂ ಮಾಡಿದ್ದೇವೆ. ಇನ್ನುಳಿದ ಕಾರ್ಮಿಕರನ್ನೂ ಸಹ ಖಾಯಂ ಮಾಡುತ್ತೇವೆ ಎಂದರು.
ಇದನ್ನೂ ಓದಿ:ಸ್ಮಶಾನ ಜಾಗಕ್ಕಾಗಿ ಪಂಚಾಯಿತಿಯೆದುರೇ ಶವಸಂಸ್ಕಾರ ಯತ್ನ; ಜೀವಂತ ಕೋಳಿ ಸುಟ್ಟು ಆಕ್ರೋಶ