ಬೆಂಗಳೂರು: ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರಸಿಂಗ್ ಶೇಖಾವತ್ ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ಜತೆ ಸಭೆ ನಡೆಸಲಿದ್ದಾರೆ. ಈ ಸಂದರ್ಭ ಮೇಕೆದಾಟು ಅಣೆಕಟ್ಟು ಯೋಜನೆ ವಿಚಾರ ಪ್ರಸ್ತಾಪಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.
ಟ್ವೀಟ್ ಮೂಲಕ ಆಗ್ರಹ
ಈ ಬಗ್ಗೆ ಟ್ವೀಟ್ ಮಾಡಿರುವ ಡಿಕೆಶಿ, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಜತೆ ನಡೆಸಲಿರುವ ಸಭೆಯಲ್ಲಿ ಮೇಕೆದಾಟು ಅಣೆಕಟ್ಟೆ ಯೋಜನೆ ಆರಂಭಕ್ಕೆ ಮುಹೂರ್ತ ನಿಗದಿ ಮಾಡುವರೆಂದು ನಂಬಿದ್ದೇನೆ. ಇದು ಇಡೀ ರಾಜ್ಯದ ಜನರ ನಂಬಿಕೆಯೂ ಹೌದು. ಯಡಿಯೂರಪ್ಪನವರು ಈ ನಿಟ್ಟಿನಲ್ಲಿ ಕೈ ಜೋಡಿಸುವರೆಂಬ ವಿಶ್ವಾಸವಿದೆ ಎಂದಿದ್ದಾರೆ.
‘ನಮ್ಮ ದುಡ್ಡು, ನಮ್ಮ ಜಾಗ’
ನಿನ್ನೆ ಸಹ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಸಂದರ್ಭ ಇದೇ ವಿಚಾರದ ಮೇಲೆ ಒತ್ತು ಕೊಟ್ಟು ಮಾತನಾಡಿದ್ದ ಡಿಕೆಶಿ, ನಮ್ಮ ದುಡ್ಡು, ನಮ್ಮ ಜಾಗ, ನಮ್ಮ ನೀರು. ತಮಿಳುನಾಡು ಪಾಲಿನ ನೀರಿಗೆ ನಮ್ಮ ಯಾವುದೇ ತಕರಾರು ಇಲ್ಲ. ಅವರ ಪಾಲು ಅವರಿಗೆ ಸಿಗಲಿದೆ. ಮೇಕೆದಾಟು ಯೋಜನೆ ನನ್ನ ಕ್ಷೇತ್ರದಲ್ಲೇ ಬರಲಿದ್ದು, ಇದು ಕೇವಲ ಬೆಂಗಳೂರಿನ ಜನರಿಗೆ ಕುಡಿಯುವ ನೀರು ಪೂರೈಕೆಗೆ ಹಾಗೂ ವಿದ್ಯುತ್ ಉತ್ಪಾದನೆಗೆ ಮಾತ್ರ ಬಳಕೆ ಆಗುತ್ತದೆ ಎಂದಿದ್ದರು.
‘ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಅಗತ್ಯ ನಮಗಿಲ್ಲ’
ನನ್ನ ಕ್ಷೇತ್ರದ ಹತ್ತು ಎಕರೆಗೂ ಈ ನೀರು ಬಳಸಿಕೊಳ್ಳುವುದಿಲ್ಲ. ಈ ಯೋಜನೆಗೆ ಸುಮಾರು 500 ರಿಂದ 1000 ಎಕರೆಯಷ್ಟು ರೆವಿನ್ಯೂ ಜಾಗ ಹೋಗಬಹುದು. ಯಾವ ಪ್ರದೇಶವೂ ಮುಳುಗಡೆಯಾಗುವ ಭೀತಿ ಇಲ್ಲ. ಹೀಗಾಗಿ ಇದು ಅತ್ಯಂತ ಅಗ್ಗದ ಹಾಗೂ ಉಪಯುಕ್ತ ಯೋಜನೆ. ಮುಖ್ಯಮಂತ್ರಿಗಳು ನಾಳೆ ಬೆಳಗ್ಗೆಯೇ ಟೆಂಡರ್ ಕರೆದು ಗುದ್ದಲಿ ಪೂಜೆ ಮಾಡಲಿ, ಅವರ ಜತೆ ನಾವು ನಿಲ್ಲುತ್ತೇವೆ. ನಾವು ಯೋಜನೆ ಮಾಡುತ್ತಿರುವವರು, ಹೀಗಾಗಿ ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಅಗತ್ಯ ನಮಗಿಲ್ಲ. ತಮಿಳುನಾಡಿನವರು ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಲಿ, ಏನಾದರೂ ಮಾಡಿಕೊಳ್ಳಲಿ. ಇದರಲ್ಲಿ ನಾವು ಒತ್ತಡ ಹೇರುವ ಅವಶ್ಯಕತೆ ಏನಿದೆ. ಯೋಜನೆ ಅನುಷ್ಠಾನಕ್ಕೆ ತರಬೇಕು ಅಷ್ಟೇ. ಬಿಜೆಪಿಯದ್ದು ಡಬಲ್ ಇಂಜಿನ್ ಸರ್ಕಾರ ಅಂತಾರೆ, ಈ ಯೋಜನೆಗೆ ಅಗತ್ಯ ಅನುಮತಿ ಪಡೆಯಲು ತೊಂದರೆ ಏನು? ಎಂದು ಪ್ರಶ್ನಿಸಿದ್ರು.
ಕೇಂದ್ರ ಮಂತ್ರಿ ಜತೆ ಸಿಎಂ ಮೀಟಿಂಗ್
ಇಂದು ವಿಧಾನಸೌಧದಲ್ಲಿ ಸಿಎಂ ಹಾಗೂ ಸಚಿವರು ಗಜೇಂದ್ರಸಿಂಗ್ ಶೇಖಾವತ್ ಜತೆ ನಡೆಸುವ ಸಭೆಯಲ್ಲಿ ಮೇಕೆದಾಟು ವಿಚಾರ ಪ್ರಸ್ತಾಪಿಸುವ ನಿರೀಕ್ಷೆಯಿದೆ. ಇದೇ ತಿಂಗಳ ಆರಂಭದಲ್ಲಿ ಕೇಂದ್ರ ಸಚಿವ ಶೇಖಾವತ್ರನ್ನು ಭೇಟಿಯಾಗಿದ್ದ ತಮಿಳುನಾಡಿನ ಜಲ ಸಂಪನ್ಮೂಲ ಸಚಿವ ದೊರೈ ಮುರುಗನ್, ಮೇಕೆದಾಟು ಯೋಜನೆಯನ್ನು ತಡೆಯುವಂತೆ ಕೋರಿದ್ದರು. ಈ ವಿಚಾರವಾಗಿ ಕಾನೂನು ಸಮರ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪು ನೀಡುವವರೆಗೆ ಯೋಜನೆಗೆ ಅನುಮತಿ ಕೊಡಬೇಡಿ. ಕರ್ನಾಟಕ ತರಾತುರಿಯಲ್ಲಿ ಯೋಜನೆ ಆರಂಭಿಸುತ್ತಿದೆ. ಈ ಯೋಜನೆ ಆರಂಭವಾದರೆ ಎರಡೂ ರಾಜ್ಯಗಳ ಗಡಿಯಲ್ಲಿ ಮತ್ತೆ ಸಮಸ್ಯೆ ಉಲ್ಬಣವಾಗುತ್ತದೆ. ತಮಿಳುನಾಡಿನ ರೈತರಿಗೆ ಅನ್ಯಾಯವಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದರು. ಇದೀಗ ಇಂದು ಬೆಂಗಳೂರಿಗೆ ಆಗಮಿಸಿ ಸಭೆ ನಡೆಸುವ ಗಜೇಂದ್ರಸಿಂಗ್ ಶೇಖಾವತ್ಗೆ ರಾಜ್ಯ ಸರ್ಕಾರ ವಿಚಾರದ ಮನವರಿಕೆ ಮಾಡಿಕೊಡಲಿದೆ.