ಬೆಂಗಳೂರು: ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಸಂಬಂಧ ಹಿರಿಯ ಸಚಿವರೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮಾಲೋಚನೆ ನಡೆಸಲು ನಿರ್ಧರಿಸಿದ್ದು, ರಾತ್ರಿ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಹಿರಿಯ ಸಚಿವರ ಸಭೆ ನಡೆಸಲಿದ್ದಾರೆ ಎನ್ನಲಾಗ್ತಿದೆ.
ಸಚಿವ ಸಂಪುಟ ವಿಸ್ತರಣೆ ಮಾಡಿ ವಾರ ಕಳೆದರೂ ನೂತನ ಸಚಿವರಿಗೆ ಇನ್ನೂ ಖಾತೆಗಳ ಹಂಚಿಕೆ ಮಾಡಿಲ್ಲ. ಕೆಲ ಸಚಿವರ ಖಾತೆ ಬದಲಾವಣೆ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಖಾತೆ ಹಂಚಿಕೆ ವಿಳಂಬವಾಗಿದ್ದು, ಇದಕ್ಕೂ ಮುನ್ನ ಹಿರಿಯ ಸಚಿವರೊಂದಿಗೆ ಸಿಎಂ ಯಡಿಯೂರಪ್ಪ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎಂದು ತಿಳಿದುಬಂದಿದೆ.