ಬೆಂಗಳೂರು: ಬಿಜೆಪಿ ವಿಶೇಷ ಸಭೆ ಹಾಗು ಕೋರ್ ಕಮಿಟಿ ಸಭೆ ಬೆನ್ನಲ್ಲೇ ಪಕ್ಷದ ಶಾಸಕರ ಸಭೆಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮುಂದಾಗಿದ್ದು, ನಾಳೆಯಿಂದ ಎರಡು ದಿನಗಳ ಕಾಲ ಶಾಸಕರ ಸಮಾಲೋಚನಾ ಸಭೆ ನಡೆಸಲಿದ್ದಾರೆ. ನಗರದ ಕ್ಯಾಪಿಟಲ್ ಹೋಟೆಲ್‌ನಲ್ಲಿ ಸಭೆ ನಡೆಯಲಿದೆ.
ನಾಳೆ ಬೆಳಗ್ಗೆ 11 ಗಂಟೆಗೆ ಶಾಸಕರ ಸಮಾಲೋಚನಾ ಸಭೆ ಉದ್ಘಾಟನೆ ಮಾಡಲಿರುವ ಸಿಎಂ, 11.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರ್ಗಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳ 17 ಶಾಸಕರ ಜೊತೆ ಸಮಾಲೋಚನೆ ನಡೆಸಲಿದ್ದಾರೆ.
ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮುಂಬೈ ಮತ್ತು ಮಧ್ಯ ಕರ್ನಾಟಕ ಭಾಗದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ-ಧಾರವಾಡ, ಹಾವೇರಿ, ಗದಗ ಜಿಲ್ಲೆಯ 35 ಶಾಸಕರ ಜೊತೆ,ಸಂಜೆ 6.30 ರಿಂದ ರಾತ್ರಿ 8 ಗಂಟೆಯವರೆಗೆ ಕರಾವಳಿ ಭಾಗದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ 12 ಶಾಸಕರ ಜೊತೆ ಸಮಾಲೋಚನೆ ನಡೆಸಲಿದ್ದಾರೆ.
ಜನವರಿ 5ರಂದು ಮಧ್ಯಾಹ್ನ 12 ಗಂಟೆಯಿಂದ 1.30 ರವರೆಗೆ ಮಧ್ಯ ಕರ್ನಾಟಕ, ಮೈಸೂರು ಭಾಗದ ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳ 29 ಶಾಸಕರ ಜೊತೆ ಚರ್ಚೆ ನಡೆಸಲಿದ್ದು, ಮಧ್ಯಾಹ್ನ 2.30 ರಿಂದ ಸಂಜೆ 4 ಗಂಟೆ ವರೆಗೆ ಕೇಂದ್ರ ಭಾಗದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ 26 ಶಾಸಕರ ಜೊತೆ ಸಭೆ ನಡೆಸಲಿದ್ದಾರೆ.
ಆಯಾ ಜಿಲ್ಲೆಗಳ ಶಾಸಕರು ಸಮಾಲೋಚನಾ ಸಭೆಯಲ್ಲಿ ತಮ್ಮ ಕ್ಷೇತ್ರದ ಸಮಸ್ಯೆಗಳು, ಆಗಬೇಕಾಗಿರುವ ಯೋಜನೆಗಳು, ಬೇಕಿರುವ ಅನುದಾನದ ಮೊತ್ತ ಸೇರಿದಂತೆ ಎಲ್ಲ ವಿವರಗಳನ್ನು ಮುಖ್ಯಮಂತ್ರಿಗಳ ಜೊತೆ ಹಂಚಿಕೊಳ್ಳಲಿದ್ದಾರೆ. ಉಸ್ತುವಾರಿ ಸಚಿವರು, ಸಚಿವರು ಶಾಸಕರನ್ನು ಕಡೆಗಣಿಸುತ್ತಿದ್ದಾರೆ, ಕ್ಷೇತ್ರದ ಕೆಲಸಗಳು ಆಗುತ್ತಿಲ್ಲ, ಅನುದಾನ ಸರಿಯಾಗಿ ಸಿಗುತ್ತಿಲ್ಲ ಎಂದು ಸ್ವಪಕ್ಷೀಯ ಶಾಸಕರೇ ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಶಾಸಕರ ಅಸಮಧಾನ ಶಮನಕ್ಕೆ ಸಿಎಂ ಸಭೆ ನಡೆಸಿ ಅಹವಾಲು ಆಲಿಸಲಿದ್ದಾರೆ.