ಬೆಂಗಳೂರು:ಜುಲೈ 19ವರೆಗೆ ಜಾರಿಯಲ್ಲಿರುವ ಅನ್ಲಾಕ್ 3.0 ಕೊನೆಗೊಳ್ಳುತ್ತಿದ್ದು, ನಾಳೆ ಬೆಳಗ್ಗೆಯಿಂದ ರಾಜ್ಯದಲ್ಲಿ Unlock 4.O ಜಾರಿಗೆ ಬರಲಿದೆ. ಈಗಾಗಲೇ ಅದಕ್ಕಾಗಿ ಬ್ಲೂ ಪ್ರಿಂಟ್ ಸಿದ್ಧಗೊಂಡಿದ್ದು, ಕೊರೊನಾ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಲಿರುವ ಸಿಎಂ ಯಡಿಯೂರಪ್ಪ ನೂತನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಿದ್ದಾರೆ.
ಅಧಿಕೃತ ನಿವಾಸ ಕಾವೇರಿಯಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ಅನ್ಲಾಕ್ 4.O ಬಗ್ಗೆ ಮಹತ್ವದ ಸಮಾಲೋಚನೆ ನಡೆಸಲಾಗುತ್ತದೆ. ಯಾವುದಕ್ಕೆಲ್ಲಾ ಅವಕಾಶ ಕಲ್ಪಿಸಬೇಕು, ರಿಯಾಯಿತಿ ನೀಡಬೇಕು ಎನ್ನುವ ಕುರಿತು ಚರ್ಚೆ ನಡೆಸಲಾಗುತ್ತದೆ.
ಥಿಯೇಟರ್, ಶಾಲೆಗಳನ್ನು ಹೊರತುಪಡಿಸಿ ಇಡೀ ಕರ್ನಾಟಕ ಕಂಪ್ಲೀಟ್ ಅನ್ಲಾಕ್ ಆಗುತ್ತದೆ ಎನ್ನಲಾಗುತ್ತಿದೆ. ದೊಡ್ಡ ದೊಡ್ಡ ಮಾರ್ಕೆಟ್ಗಳು, ಸಂತೆಗಳ ಆರಂಭಕ್ಕೆ ಅನುಮತಿ ಸಿಗಲಿದ್ದು, ಬಾರ್, ರೆಸ್ಟೋರೆಂಟ್ಗಳು ಓಪನ್ ಆಗಿರುವ ಬೆನ್ನಲ್ಲೇ ಪಬ್ಗಳಿಗೂ ಅನುಮತಿ ಭಾಗ್ಯ ನಿರೀಕ್ಷೆ ಇದೆ. ವೀಕೆಂಡ್ ಕರ್ಫ್ಯೂ ರಿಲೀಫ್ ನೀಡಲಾಗಿದ್ದು, ನೈಟ್ ಕರ್ಫ್ಯೂ ಸಮಯ ಕಡಿತ ಅಥವಾ ಸಂಪೂರ್ಣ ತೆರವು ಮಾಡುವ ಸಾಧ್ಯತೆ ಇದೆ. ಈಗಾಗಲೇ ಶೇ.50ರಷ್ಟು ಕಾರ್ಯ ನಿರ್ವಹಿಸುತ್ತಿರುವ ಕ್ಷೇತ್ರಗಳಿಗೆ ಮತ್ತಷ್ಟು ವಿನಾಯಿತಿ ನೀಡುವ ಸಾಧ್ಯತೆ ಇದೆ.
ಸ್ಯಾಂಡಲ್ವುಡ್ ಒತ್ತಡಕ್ಕೆ ರಾಜ್ಯ ಸರ್ಕಾರ ಮಣಿಯುತ್ತಾ ಎನ್ನುವ ಪ್ರಶ್ನೆ ಎದುರಾಗಿದ್ದು, ಥಿಯೇಟರ್, ಮಲ್ಟಿಪ್ಲೆಕ್ಸ್ ಆರಂಭಕ್ಕೆ ಅನುಮತಿ ಸಿಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.