ಬೆಂಗಳೂರು : ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಿಂದ ಬೆಳೆ ಸಾಲ ಪಡೆದು ಸುಸ್ತಿದಾರರಾಗಿರುವ ರೈತರಿಗೆ ಒಟಿಎಸ್ (ಒನ್ ಟೈಮ್ ಸೆಟಲ್ಮೆಂಟ್) ಯೋಜನೆಯಡಿ ಅನುಕೂಲ ಕಲ್ಪಿಸುವ ಕುರಿತು ಬ್ಯಾಂಕಿನ ಮುಖ್ಯಸ್ಥರು, ನಬಾರ್ಡ್ ಹಾಗೂ ಪ್ರವರ್ತಕ ಬ್ಯಾಂಕ್ ಆದ ಕೆನರಾ ಬ್ಯಾಂಕ್ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಶಾಸಕ ಬಿ.ಆರ್. ಪಾಟೀಲ ಹಾಗೂ ದರ್ಶನ್ ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ಸಿದ್ದರಾಮಯ್ಯರನ್ನು ಭೇಟಿಯಾದ ರೈತ ಮುಖಂಡರ ನಿಯೋಗದೊಂದಿಗೆ ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕಿನಿಂದ ಬೆಳೆ ಸಾಲ ಪಡೆದು ಸುಸ್ತಿದಾರರಾಗಿರುವ ರೈತರ ಸಮಸ್ಯೆ ಕುರಿತು ಚರ್ಚಿಸಿದರು. ಅಲ್ಲದೆ, ಪರಿಹಾರ ಕಂಡುಕೊಳ್ಳಲು ಮುಖ್ಯ ಕಾರ್ಯದರ್ಶಿ ಹಾಗೂ ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು.
ಬ್ಯಾಂಕಿನಿಂದ ಬೆಳೆ ಸಾಲ ಪಡೆದ ರೈತರು, ಅತಿವೃಷ್ಟಿ, ಅನಾವೃಷ್ಟಿ, ಬೆಲೆ ಕುಸಿತದಂತಹ ಸಮಸ್ಯೆಗಳಿಂದಾಗಿ ಸಕಾಲದಲ್ಲಿ ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬ್ಯಾಂಕಿನ ಸಿಬ್ಬಂದಿ ಸಾಲ ಮರುಪಾವತಿಗೆ ನೊಟೀಸು, ಲೀಗಲ್ ನೊಟೀಸ್ಗಳನ್ನು ಕಳುಹಿಸಿ, ಅದರ ವೆಚ್ಚವನ್ನು ರೈತರ ಮೇಲೆಯೇ ಹಾಕುತ್ತಿದ್ದಾರೆ. ಇಂತಹ ಕ್ರಮಗಳಿಂದಾಗಿ 30,000 ರೂ. ಮೊತ್ತದ ಸಾಲಕ್ಕೆ 2.8 ಲಕ್ಷ ರೂ. ಪಾವತಿಸುವಂತೆ, 3 ಲಕ್ಷ ರೂ. ಸಾಲಕ್ಕೆ 3೦ ಲಕ್ಷ ರೂ. ಪಾವತಿಸುವಂತೆ ಕಿರುಕುಳ ನೀಡಲಾಗುತ್ತಿದೆ.
ಇದನ್ನು ಪ್ರತಿಭಟಿಸಿ, 8 ತಿಂಗಳಿನಿಂದ ರೈತ ಹೋರಾಟಗಾರರು ಧರಣಿ ನಡೆಸುತ್ತಿದ್ದಾರೆ. ರೈತರು ಓಟಿಎಸ್ ಅಡಿ ಶೇ. 50 ರಷ್ಟು ಅಸಲು ಪಾವತಿಸಲು ಸಿದ್ಧರಿದ್ದಾರೆ. ರೈತರ ಸಮಸ್ಯೆ ಬಗೆಹರಿಸಿ, ಅನುಕೂಲ ಮಾಡಿಕೊಡುವಂತೆ ರೈತ ಮುಖಂಡರ ನಿಯೋಗ ಮನವಿ ಮಾಡಿತು. ಹಲವು ರಾಷ್ಟ್ರೀಕೃತ ಬ್ಯಾಂಕುಗಳು ರೈತರಿಗೆ ಈ ಅನುಕೂಲ ಕಲ್ಪಿಸಿವೆ ಎಂದು ತಿಳಿಸಿದರು.