ಬೆಂಗಳೂರು: ಇಂಡಸ್ಟ್ರೀಸ್ ಕ್ಲಸ್ಟರ್ ಡೆವಲಪ್ಮೆಂಟ್ ಬಗ್ಗೆ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಸಂಜೆ ಚರ್ಚೆ ನಡೆಸಿದರು.
ಇಂಡಸ್ಟ್ರೀಸ್ ಕ್ಲಸ್ಟರ್ ಡೆವಲಪ್ ಮೆಂಟ್ ಕುರಿತು ಸಿಎಂ ಸಭೆ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಅವರು ಮುಖ್ಯಮಂತ್ರಿ ಅವರಿಗೆ ವರದಿ ನೀಡಿದರು. ಇದರಲ್ಲಿ ಕೊಪ್ಪಳದಲ್ಲಿ ಟಾಯ್ಸ್ ಕ್ಲಸ್ಟರ್ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದ್ದು, ಈಗಾಗಲೇ ಕೆಲಸ ಆರಂಭಗೊಂಡಿದೆ ಎಲ್ಲಾ ಕೆಲಸ ಮುಗಿದರೆ ಇದು ಭಾರತದಲ್ಲೇ ಅತಿ ದೊಡ್ಡ ಟಾಯ್ಸ್ ಕ್ಲಸ್ಟರ್ ಆಗಲಿದೆ ಎಂದು ಅವರು ಹೇಳಿದರು.
ಇನ್ನು ಬಳ್ಳಾರಿಯಲ್ಲಿ ಟೆಕ್ಸ್ಟೈಲ್ಸ್ ಇಂಡಸ್ಟ್ರೀಸ್ ಈಗಾಗಲೇ ಅಭಿವೃದ್ಧಿ ಹೊಂದುತ್ತಿದೆ. ಆದರೆ, ಅದು ಕೇವಲ ಬಳ್ಳಾರಿ ನಗರಕ್ಕೆ ಮಾತ್ರ ಸೀಮಿತವಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಈ ಟೆಕ್ಸ್ಟೈಲ್ಸ್ ಇಂಡಸ್ಟ್ರೀಸ್ ಅನ್ನು ಬಳ್ಳಾರಿಯ ಇತರೆ ತಾಲೂಕುಗಳಲ್ಲೂ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದು, ಇದರಿಂದ ಮಹಿಳೆಯರಿಗೆ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಎಂದು ತಿಳಿಸಿದರು.
ಇನ್ನು ಚಿಕ್ಕಬಳ್ಳಾಪುರದಲ್ಲಿ ಮೊಬೈಲ್ ಪೋನ್ ಮತ್ತು ಇತರೆ ಎಲೆಕ್ಟ್ರಾನಿಕ್ ವಸ್ತುಗಳ ಇಂಡಸ್ಟ್ರೀಸ್ ಕ್ಲಸ್ಟರ್ ನಿರ್ಮಾಣ ಮಾಡಲಾಗಿದ್ದು, ಹಲವು ಕಂಪನಿಗಳು ಇಲ್ಲಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು ಉತ್ಸುಕರಾಗಿದ್ದಾರೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದರೆ ಭಾರತದಲ್ಲಿಯೇ ಅತಿ ದೊಡ್ಡ ಮೊಬೈಲ್ ಕ್ಲಸ್ಟರ್ ಆಗಿ ಇದು ನಿರ್ಮಾಣವಾಗಲಿದೆ ಎಂದರು.
ಚಿತ್ರದುರ್ಗದಲ್ಲಿ ಎಲ್ಇಡಿ ಲೈಟ್ಸ್ ಗಳ ಕ್ಲಸ್ಟರ್ ಸ್ಥಾಪನೆಗೆ ಉದ್ದೇಶಿಸಲಾಗಿದ್ದು, ಈಗಾಗಲೇ ಹಲವು ಕಂಪನಿಗಳು ಇಲ್ಲಿ ಎಲ್ಇಡಿ ಕೈಗಾರಿಕಾ ಸ್ಥಾಪನೆಗೆ ಆಸಕ್ತಿ ತೋರಿಸಿವೆ. ಇನ್ನೂ ಕಲಬುರಗಿಯಲ್ಲಿ ಸೋಲಾರ್ ಪ್ಯಾನಲ್ಸ್ ಮತ್ತು ಇತರೆ ಬಿಡಿ ಭಾಗಗಳನ್ನು ತಯಾರಿಸುವ ಕ್ಲಸ್ಟರ್ ಸ್ಥಾಪನೆಗೆ ಹಿಂದೆ ಉದ್ದೇಶಿಸಲಾಗಿತ್ತು. ಆದರೆ, ಇದು ರಾಜಧಾನಿಯಿಂದ ತುಂಬ ದೂರದಲ್ಲಿ ಇರುವುದರಿಂದ ಇಲ್ಲಿಗೆ ಬರಲು ಯಾರು ಆಸಕ್ತಿ ತೋರಿಸುತ್ತಿಲ್ಲ. ಹಾಗಾಗಿ, ಇದನ್ನು ಬೇರೆ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದು ಸೂಕ್ತ ಜಿಲ್ಲೆಯ ಹುಡುಕಾಟದಲ್ಲಿ ತೊಡಗಿದ್ದೇವೆ ಎಂದು ವಿವರಿಸಿದರು.
ಹಾಸನದಲ್ಲಿ ಟೈಲ್ಸ್, ಸ್ಯಾನಿಟರಿ ಬಾತ್ ರೂಮ್ ಸೇರಿದಂತೆ ಇತರೆ ಪ್ರಿಂಟಿಂಗ್ ಕ್ಲಸ್ಟರ್ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಬಹಳಷ್ಟು ಕಂಪನಿಗಳು ಈಗಾಗಲೇ ಆಸಕ್ತಿ ತೋರಿವೆ. ಇನ್ನು ತುಮಕೂರಿನಲ್ಲಿ ಸ್ಪೋರ್ಟ್ ಇಂಡಸ್ಟ್ರೀಸ್ ಕ್ಲಸ್ಟರ್ನ ಯೋಜನೆಯಿದೆ. ಶಿವಮೊಗ್ಗದ ಆಯುರ್ವೇದಿಕ್ ಬಯೋ ಫಾರ್ಮಾ ಹೆಲ್ತ್ ಆ್ಯಂಡ್ ವೆಲ್ತ್ ಕ್ಲಸ್ಟರ್ ಯೋಜನೆಗೆ ಸೂಕ್ತ ಜಿಲ್ಲೆಯಾಗಿದ್ದು, ಅಲ್ಲಿನ ಹವಾಮಾನ ಇದಕ್ಕೆ ಪೂರಕವಾಗಿದೆ. ಹಾಗಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಆಯುರ್ವೇದಿಕ್ ಕ್ಲಸ್ಟರ್ ಸೂಕ್ತ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು.
ಇನ್ನೂ ಈ ಎಲ್ಲಾ ಅಭಿವೃದ್ಧಿ ಯೋಜನೆಗಳನ್ನ ಆಲಿಸಿದ ಸಿಎಂ, ಆದಷ್ಟು ಬೇಗ ನೀವು ನೀಡಿರುವ ಈ ವರದಿಯ ಆಧಾರದ ಮೇಲೆ ಕೆಲಸ ಮಾಡಿ ರಾಜ್ಯದ ಜನರಿಗೆ ಉದ್ಯೋಗ ಕೊಡಿಸುವತ್ತ ಗಮನಹರಿಸಬೇಕೆಂದು ಅಧಿಕಾರಿಗಳಿಗೆ ತಿಳಿದರು. ಜೊತೆಗೆ ಕೇವಲ ವರದಿ ನೀಡುವುದಲ್ಲ ಹೇಳಿದ ಸಮಯಕ್ಕೆ ಕೆಲಸ ಮುಗಿಸಬೇಕು ಎಂದು ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು.