ಬೆಂಗಳೂರು: ಸಿಎಂರೇಸ್ ಕೋರ್ಸ್ ಸರ್ಕಾರಿ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನೇಕಾರರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಹಲವು ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.
ಸಭೆಯಲ್ಲಿ ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಕೆಎಚ್ ಡಿ ಸಿ ಅಧ್ಯಕ್ಷ ಸಿದ್ದು ಸವದಿ, ಶಾಸಕ ಅಭಯ್ ಪಾಟೀಲ್, ಮಹದೇವಪ್ಪ ಯಾದವಾಡ, ಮಾಜಿ ಶಾಸಕ ಎಂ ಡಿ ಲಕ್ಷ್ಮೀನಾರಾಯಣ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಐಎಸ್ಎನ್ ಪ್ರಸಾದ್ ಭಾಗವಹಿಸಿದ್ದರು.
ನೇಕಾರರ ಬೇಡಿಕೆ ಈಡೇರಿಕೆಗೆ ಕ್ರಮ:ಈ ಸಂದರ್ಭದಲ್ಲಿ ನೇಕಾರರ ನಾನಾ ಬೇಡಿಕೆ ಈಡೇರಿಕೆ ಕುರಿತು ಚರ್ಚೆ ನಡೆಸಿ ಹಲವು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ವೃತ್ತಿಪರ ನೇಕಾರ ಸಮುದಾಯಗಳಿಗೆ ಶೇ. 50 ರಷ್ಟು ಸಹಾಯಧನ ನೀಡುವ ಯೋಜನೆ ರೂಪಿಸುವುದು.ಪವರ್ ಲೂಮ್ ನಲ್ಲಿ ಕಾರ್ಯನಿರ್ವಹಿಸುವ ಕೂಲಿಕಾರರಿಗೆ ನೇಕಾರ ಸಮ್ಮಾನ್ ಯೋಜನೆ ವಿಸ್ತರಿಸುವುದು. ನೇಕಾರರ ಜನವಸತಿ ಪ್ರದೇಶದಲ್ಲಿರುವ ನೇಕಾರರಿಗೆ Occupancy certificate ನೀಡಲು ತೀರ್ಮಾನಿಸಲಾಯಿತು.
ಪ್ರಮುಖ ತೀರ್ಮಾನಗಳೇನು?:ಮನೆಯಲ್ಲಿ ಉದ್ಯೋಗ ನಡೆಸುತ್ತಿರುವ ನೇಕಾರರಿಗೆ ಗುಡಿ ಕೈಗಾರಿಕೆಗಳೆಂದು ಪರಿಗಣಿಸಿ, ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿಯಿಂದ ವಿನಾಯಿತಿ ನೀಡಲು ಆದೇಶ ಹೊರಡಿಸಲು ತೀರ್ಮಾನ.
ಸರ್ಕಾರದ ನೇಕಾರ (ಕೈಮಗ್ಗ ಮತ್ತು ವಿದ್ಯುತ್ ಚಾಲಿತ) ನಿಗಮಗಳ ಉತ್ಪಾದನಾ ಸಾಮರ್ಥ್ಯದ ಅನುಗುಣವಾಗಿ ವಿದ್ಯಾವಿಕಾಸ ಯೋಜನೆಯಡಿ ಸಮವಸ್ತ್ರ ಪೂರೈಕೆ ಪ್ರಮಾಣ ನಿಗದಿಪಡಿಸಿ, ಉಳಿದ ಪ್ರಮಾಣಕ್ಕೆ ಟೆಂಡರ್ ಕರೆಯಲು ತೀರ್ಮಾನಿಸಲಾಯಿತು.
-ಡಿಸೆಂಬರ್ ತಿಂಗಳಿನಲ್ಲಿ ಕಾರ್ಯಾದೇಶ ನೀಡಿ, ಸಕಾಲದಲ್ಲಿ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.