ಬೆಂಗಳೂರು:ಭಾರತಕ್ಕೆ ಆವರಿಸಿರುವ ಕೊರೊನಾ ಸೋಂಕೆಂಬ ಕಗ್ಗತ್ತಲ್ಲನ್ನು ಓಡಿಸಲು ದೇಶವಾಸಿಗಳೆಲ್ಲರೂ ಮನೆಯ ಅಂಗಳ, ಬಾಲ್ಕನಿಗಳಲ್ಲಿ ನಿಂತು ದೀಪ, ಮೇಣದ ಬತ್ತಿ ಹಾಗೂ ಟಾರ್ಚ್ ಲೈಟ್ಗಳನ್ನು ಉರಿಸಿ ದೇಶಕ್ಕಂಟಿರುವ ಕೊರೊನಾ ವೈರಾಣು ವಿರುದ್ಧ ಹೋರಾಡಲು ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ರವಾನಿಸಿದ್ರು.
ಪ್ರಧಾನಿ ನರೇಂದ್ರ ಮೋದಿ ಕರೆಯಂತೆ ರಾತ್ರಿ 9 ಗಂಟೆಗೆ ಸರಿಯಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ವಿದ್ಯುತ್ ದೀಪಗಳನ್ನು ಆರಿಸಿ ಕುಟುಂಬ ಸದಸ್ಯರ ಜೊತೆಯಲ್ಲಿ ಹಣತೆಗಳನ್ನು ಹಚ್ಚಿದರು. 9 ನಿಮಿಷಗಳ ಕಾಲ ದೀಪಗಳನ್ನು ಬೆಳಗಿಸಿದರು. ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೋದಿಯವರ ಕರೆಯಂತೆ ದೀಪ ಬೆಳಗಿಸಿದೆ. ಜಾತಿ, ಧರ್ಮ ಎಲ್ಲಾ ಮರೆತು ಮೋದಿ ಕರೆಗೆ ಬೆಂಬಲ ನೀಡಿದ್ದಾರೆ. ಇದೆಲ್ಲಾ ಏಪ್ರಿಲ್ 14ರಂದು ಕೊನೆಯಾಗಬೇಕು. ಅಂದರೆ ಜನರು ಲಾಕ್ಡೌನ್ ಕಟ್ಟುನಿಟ್ಟಾಗಿ ಆಚರಣೆ ಮಾಡಬೇಕು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಲಾಕ್ಡೌನ್ ಸಡಿಲಗೊಳಿಸೋಣ. ದೀಪ ಬೆಳಗಿಸಿದ ರಾಜ್ಯದ ಜನತೆಗೆ ಅಭಿನಂದನೆ. ಮೋದಿ ನೀಡಿದ ಕರೆ ಯಶಸ್ವಿಯಾಗಿದೆ ಎಂದರು.