ಬೆಂಗಳೂರು:ಬಿಜೆಪಿಯವರು ಹಾಗೂ ಆದಾಯ ತೆರಿಗೆ ಅಧಿಕಾರಿಗಳು ಹರಿಶ್ಚಂದ್ರನ ಮಕ್ಕಳಾ? ಇವರೇನು ದೇವಲೋಕದಿಂದ ಇಳಿದು ಬಂದಿದ್ದಾರಾ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದ್ದಾರೆ.
ಕೇಂದ್ರದ ತನಿಖಾ ಸಂಸ್ಥೆಗಳನ್ನು ರಾಜಕೀಯ ಕಾರಣಕ್ಕಾಗಿ ಬಳಸಿಕೊಂಡಿರುವುದು ಸರಿಯಲ್ಲ. ಬಿಜೆಪಿ ಹಿಂದಿನ ಐದು ವರ್ಷಗಳ ಆಧಿಕಾರ ಅವಧಿಯಲ್ಲಿ ಮಾಡಿದ ಕೊಟ್ಯಂತರ ರೂ. ಲೂಟಿ ನಮಗೆ ಗೊತ್ತಿಲ್ಲವೇ. ಅಲ್ಲದೇ ಐಟಿ ಆಧಿಕಾರಿಗಳೇನು ದೇವಲೋಕದಿಂದ ಇಳಿದು ಬಂದಿಲ್ಲ. ರೇಡ್ ಮಾಡಿ ಅವರು ಕೊಟ್ಯಂತರ ರೂ.ಆಸ್ತಿ ಸಂಪಾದಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಂಕೇತಿಕ ಪ್ರತಿಭಟನೆ ದೇಶದ ಒಕ್ಕೂಟ ಬಲಪಡಿಸುವ ಕೆಲಸ ಇದಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೇಂದ್ರ ತನಿಖಾ ಸಂಸ್ಥೆಗಳನ್ನೇ ದುರುಪಯೋಗ ಮಾಡಿಕೊಂಡಿದೆ. ಇದೊಂದು ಕೆಟ್ಟ ಸಂಸ್ಕೃತಿ. ಐಟಿ ಇಲಾಖೆಯ ನಿರ್ದೇಶಕ ಪ್ರಾಮಾಣಿಕ ಅಧಿಕಾರಿನಾ? ಬಾಂಬೆಯಲ್ಲಿ ಅಕ್ರಮವಾಗಿ ಫ್ಲಾಟ್ ಖರೀದಿಸಿರುವುದು ನಮಗೆ ಗೊತ್ತಿಲ್ಲವೇ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಸಾಮಾನ್ಯವಾಗಿ ದಾಳಿ ಮಾಡುವ ವೇಳೆ ಐಟಿ ಸ್ಥಳೀಯ ಪೊಲೀಸರ ನೆರವು ಪಡೆಯುತ್ತೆ. ಅದರೆ, ನಿನ್ನೆ ನಡೆದ ದಾಳಿಯಲ್ಲಿ ಸಿಆರ್ಪಿಎಫ್ ಪೊಲೀಸರ ಸಹಕಾರದಿಂದ ದಾಳಿ ನಡೆಸಲಾಗಿದೆ. ಇದು ರಾಜಕೀಯ ಪ್ರೇರಿತವಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಕೇಂದ್ರದ ವಿರುದ್ಧ ದೊಡ್ಡ ಹೋರಾಟ ಮಾಡಬೇಕಾಗುತ್ತದೆ. ದಾಳಿಯಿಂದ ನಾನೇನು ಭಯ ಬೀಳಲ್ಲ. ವಿರೋಧ ಪಕ್ಷಗಳನ್ನು ಸೋಲಿಸುವುದಕ್ಕೆ ಬಿಜೆಪಿ ಕೀಳುಮಟ್ಟದ ರಾಜಕಾರಣ ನಡೆಸುತ್ತಿದೆ. ಕರ್ನಾಟಕದಿಂದ ಬಿಜೆಪಿಯ ಪತನ ಶುರುವಾಗಲಿದೆ ಎಂದು ಭವಿಷ್ಯ ನುಡಿದರು.