ಬೆಂಗಳೂರು:ಸಿಎಂ ಜೊತೆ ಮಾತನಾಡೋದು ಏನಿದೆ. ಇನ್ನಾದರೂ ಎಚ್ಚೆತ್ತುಕೊಂಡು ಜನಪರ ಹೋರಾಟಕ್ಕೆ ಸಹಕಾರ ನೀಡುವುದು ಅವರ ಕರ್ತವ್ಯವೆಂದು ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಗುಡುಗಿದ್ದಾರೆ.
ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅಹೋರಾತ್ರಿ ಧರಣಿಯ ಕೊನೆಯ ದಿನವಾದ ಇಂದು ಕಾರ್ಯಕರ್ತರ ಜೊತೆ ಮಾತನಾಡಿದ ಅವರು, ನಿನ್ನೆ, ಮೊನ್ನೆ ಎರಡು ದಿನ ಈ ಸರ್ಕಾರ ವಿರುದ್ಧ ನಡೆಸಿದ ಧರಣಿಯಲ್ಲಿ ಎಲ್ಲರೂ ಒಮ್ಮತದಿಂದ ಸಹಕರಿಸಿದ್ದಕ್ಕೆ ಧನ್ಯವಾದ ತಿಳಿಸಿದರು. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಸಿಎಂ ರಾಜೀನಾಮೆ ನೀಡಬೇಕಾಗಿತ್ತು. ಆದರೆ ಅಧಿಕಾರಕ್ಕಾಗಿ ಅಂಟಿಕೊಂಡು ಕುಳಿತಿದ್ದಾರೆ. ರಾಜ್ಯದ ಶೇಕಡಾ 75 ರಷ್ಟು ಭಾಗದಲ್ಲಿ ಮಳೆ ಆಗದೇ ನೀರಿಗೆ ಹಾಹಾಕಾರವಿದೆ. ಬರಗಾಲಕ್ಕೆ ಈ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಇನ್ನು ಜಿಂದಾಲ್ಗೆ ಕೊಟ್ಟಿರುವ ಭೂಮಿಯನ್ನು ಮುಂದುವರಿಸಿಲು ನಮಗೇನು ತೊಂದರೆಯಿಲ್ಲ. ಅಲ್ಲಿ ಅದಿರು ಸಿಗುತ್ತಿದ್ದು, ಈ ಭೂಮಿಯನ್ನು ಮಾರಾಟ ಮಾಡಬಾರದು. ಸಿಎಂ ಕುಮಾರಸ್ವಾಮಿ ಅವರು ಸಂಪುಟ ಉಪ ಸಮಿತಿ ರಚನೆ ಮಾಡಿ ರಾಜ್ಯದ ಜನರ ಕಣ್ಣಿಗೆ ಮಣ್ಣು ಎರಚಲು ಹೊರಟಿದ್ದಾರೆ. ಆದ್ರೆ ನಾವು ಎಲ್ಲ ಹೋರಾಟಕ್ಕೆ ಸಿದ್ಧರಿದ್ದೇವೆ ಎಂದು ಬಿಎಸ್ವೈ ಎಚ್ಚರಿಕೆ ರವಾನಿಸಿದರು.
ಇಂದು ಸಿಎಂ ಪತ್ರ ಬರೆದು ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ. ಸಿಎಂ ಜೊತೆ ಮಾತನಾಡುವುದು ಏನಿದೆ. ಇದು ನಿಮ್ಮ ವಿರುದ್ಧ ಮಾಡುತ್ತಿರುವ ಹೋರಾಟ ಅಲ್ಲ. ಜನರ ಪರ ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟ. ಇನ್ನಾದರೂ ಎಚ್ಚೆತ್ತುಕೊಂಡು ಜನಪರ ಹೋರಾಟಕ್ಕೆ ಸಹಕಾರ ನೀಡಿ ಎಂದು ಯಡಿಯೂರಪ್ಪ ಆಗ್ರಹಿಸಿದರು.
ಮಾಧ್ಯಮಗಳ ಹತ್ತಿಕ್ಕುವ ಪ್ರಯತ್ನ:
ಸಿಎಂ ಮಾಧ್ಯಮಗಳ ವಿರುದ್ಧ ತಿರುಗಿ ಬಿದ್ದಿರುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮದ ಪಾತ್ರ ದೊಡ್ಡದಿದೆ. ಅದನ್ನು ಹತ್ತಿಕ್ಕುವ ಕೆಲಸ ಮಾಡಬಾರದು. ಇನ್ಮ ಮುಂದೆಯಾದರೂ ಸಿಎಂ ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳಲಿ. ಮಾಧ್ಯಮದವರು ಯಾವುದು ಸರಿ ಅದನ್ನ ಬಿತ್ತರಿಸುತ್ತಾರೆ ಎಂದು ಬಿಎಸ್ವೈ ಕಿವಿಮಾತು ಹೇಳಿದರು.