ಬೆಂಗಳೂರು: ಕೊರೊನಾ ಹಿನ್ನೆಲೆ ಪ್ರಧಾನಿ ಮೋದಿ ಸಿಎಂ ಯಡಿಯೂರಪ್ಪ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.ಸಿಎಂ ಯಡಿಯೂರಪ್ಪ ಜೊತೆ ಸುಮಾರು ಆರು ನಿಮಿಷಗಳ ಕಾಲ ಮೋದಿ ಸಂಭಾಷಣೆ ಮಾತನಾಡಿದರು.
ಈ ವೇಳೆ, ಸಿಎಂ ರಾಜ್ಯದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಧಾನಿಗೆ ವಿವರಣೆ ನೀಡಿದರು. ಮೊದಲಿಗೆ ಮಹಾರಾಷ್ಟ್ರ ಸಿಎಂ ಜೊತೆ ಚರ್ಚೆ ನಡೆಸಿದ ಪ್ರಧಾನಿ ಮೋದಿ, ಬಳಿಕ ಕೇರಳ ಸಿಎಂ ಜೊತೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಸಂವಾದ ನಡೆಸಿದರು.
ಅದಾದ ಬಳಿಕ ಸಿಎಂ ಯಡಿಯೂರಪ್ಪ ಜೊತೆ ಸಂವಾದ ನಡೆಸಿ, ಸಾರ್ವಜನಿಕರ ಒಳಿತಿಗಾಗಿ ಈ ವಿಡಿಯೋ ಸಂವಾದ ಅಗತ್ಯವಾಗಿದೆ. ದಿನೇ ದಿನೆ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ನಾವು ಇನ್ನಷ್ಟು ಜಾಗೃತರಾಗಬೇಕು ಎಂದು ಸೂಚನೆ ನೀಡಿದರು.
ಇದೇ ವೇಳೆ, ರಾಜ್ಯದಲ್ಲಿ ಕೊರೊನಾ ವೈರಸ್ ತಡೆಗಟ್ಟಲು ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಪ್ರಧಾನ ಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು. . ಕೊರೊನಾ ನಿಯಂತ್ರಣಕ್ಕೆ ಯಾವ ರೀತಿ ಸಹಾಯ ಬೇಕು ಅನ್ನೋ ಮನವಿ ನೀಡಿದರೆ ಅದನ್ನು ಕೇಂದ್ರ ಸರ್ಕಾರ ನೀಡಲು ಸಿದ್ಧವಿದೆ. ದೇಶದ ಯಾವ ರಾಜ್ಯಗಳಲ್ಲಿಯೂ ಔಷಧಗಳ ಕೊರತೆ ಆಗದಂತೆ ಸರ್ಕಾರ ನೋಡಿಕೊಳ್ಳುತ್ತದೆ. ಹೆಚ್ಚಿನ ಔಷಧ ಅಗತ್ಯ ಬಿದ್ದರೆ ಅದನ್ನು ಒದಗಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದರು.
ಈ ವೇಳೆ ಸಿಎಂ ನಾವು ಈಗಾಗಲೇ ಜನಸಂದಣಿ ಸೇರದ ರೀತಿ ಕ್ರಮ ವಹಿಸಿದ್ದೇವೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ ಮಾಡಿಸಿದ್ದೇವೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇರಿಸಿದ್ದೇವೆ ಎಂದು ವಿವರಿಸಿದರು. ಜನತಾ ಕರ್ಫ್ಯೂ ದಿನಕ್ಕೆ ಕರ್ನಾಟಕ ಸಂಪೂರ್ಣ ಸಿದ್ಧವಾಗಿದೆ. ನಾವು ಕೂಡ ಭಾನುವಾರ ಎಲ್ಲಾ ಸ್ಥಗಿತ ಮಾಡಿ ಜನತಾ ಕರ್ಫ್ಯೂಗೆ ಸಜ್ಜಾಗಿದ್ದೇವೆ ಎಂದು ಪ್ರಧಾನಿಗೆ ತಿಳಿಸಿದರು.