ಬೆಂಗಳೂರು: ತಮ್ಮ ತಮ್ಮ ಉಸ್ತುವಾರಿ ಜಿಲ್ಲೆಗಳಿಗೆ ತೆರಳಿ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದತ್ತ ಗಮನಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆ ನಂತರ ಜಿಲ್ಲಾ ಪ್ರವಾಸಕ್ಕೆ ಮುಂದಾಗುವಂತೆ ಎಲ್ಲ ಸಚಿವರಿಗೂ ಸಿಎಂ ನಿರ್ದೇಶನ ನೀಡಿದ್ದು, ನೆರೆ ಪರಿಹಾರ ಕಾರ್ಯ, ಕೋವಿಡ್ ನಿಯಂತ್ರಣದ ಜೊತೆಯಲ್ಲಿ ಸ್ಥಳೀಯ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸುವಂತೆ ಕಟ್ಟಪ್ಪಣೆ ಮಾಡಿದ್ದಾರೆ.
ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಿದ್ಧತೆ ನಡೆಸುತ್ತಿವೆ ಹಾಗಾಗಿ ಸಚಿವರು ತಮ್ಮ ತಮ್ಮ ಇಲಾಖೆಯಲ್ಲಿನ ಪ್ರಗತಿ, ಸಾಧನೆ, ಯೋಜನೆಗಳ ಅನುಷ್ಠಾನ ಕುರಿತು ಸಮಗ್ರ ಮಾಹಿತಿಯನ್ನು ಹೊಂದಿರಬೇಕು, ಉಸ್ತುವಾರಿ ಜಿಲ್ಲೆಯಲ್ಲಿ ಅದಷ್ಟು ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ನಡೆಸಬೇಕು, ಸೆ. 21 ರಂದು ಮಳೆಗಾಲದ ಅಧಿವೇಶನ ಆರಂಭಗೊಳ್ಳಲಿದ್ದು ಅಷ್ಟರಲ್ಲಿ ಎಲ್ಲಾ ಸಚಿವರು ಸಂಪೂರ್ಣ ಸಿದ್ಧತೆ ಮಾಡಿಕೊಂಡಿರಬೇಕು ಎಂದು ಸೂಚನೆ ನೀಡಿದ್ದಾರೆ.
ಆಗಸ್ಟ್ ನಲ್ಲಿ ಎಲ್ಲಾ ಸಚಿವರಿಗೂ ಅವರವರ ಉಸ್ತುವಾರಿ ಜಿಲ್ಲೆಗೆ ಹೋಗಿ ನೆರೆಹಾನಿ ಪರಿಹಾರ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಸಿಎಂ ಸೂಚನೆ ನೀಡಿದ್ದರು ಇದೀಗ ಮತ್ತೊಂದು ಸುತ್ತಿನ ಪ್ರವಾಸಕ್ಕೆ ಸಂಪುಟ ಸಹೋದ್ಯೋಗಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.