ಬೆಂಗಳೂರು:ಕ್ಷೇತ್ರಗಳ ಕೆಲಸ ಆಗುತ್ತಿಲ್ಲ ಎನ್ನುವ ಕಾರಣ ಮುಂದಿಟ್ಟು ನಿನ್ನೆ ರಾತ್ರಿ ಕೆಲ ಶಾಸಕರು ನಡೆಸಿದ ಸಭೆಯಂತಹ ಭಿನ್ನರಾಗದ ಚಟುವಟಿಕೆಯಿಂದ ಸಿಎಂ ಬಿ.ಎಸ್.ಯಡಿಯೂರಪ್ಪ ಎಚ್ಚೆತ್ತುಕೊಂಡಿದ್ದಾರೆ. ಡಿಸಿಎಂ ಮತ್ತು ಸಚಿವರುಗಳಿಗೆ ಸ್ಥಳೀಯ ಸಮಸ್ಯೆ ಪರಿಶೀಲಿಸುವಂತೆ ಆದೇಶದ ಮೂಲಕ ಸೂಚನೆ ನೀಡಿದ್ದಾರೆ.
ಜಿಲ್ಲೆಗಳಿಗೆ ಪ್ರಗತಿ ಪರಿಶೀಲನಾ ಸಭೆ ಹಾಗೂ ಕಚೇರಿ ಕೆಲಸ ಕಾರ್ಯಗಳ ನಿಮಿತ್ತವಾಗಿ ಪ್ರವಾಸ ಮಾಡಿದ ಸಂದರ್ಭದಲ್ಲಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳ ಶಾಸಕರು, ವಿಧಾನ ಪರಿಷತ್ ಸದಸ್ಯರುಗಳಿಗೆ ಹಾಗೂ ಪಕ್ಷದ ಜಿಲ್ಲಾಧ್ಯಕ್ಷರಿಗೆ ಪ್ರವಾಸ ಮಾಡುವ ಬಗ್ಗೆ ಕಡ್ಡಾಯವಾಗಿ ಗಮನಕ್ಕೆ ತರುವಂತೆ ಎಲ್ಲಾ ಡಿಸಿಎಂಗಳು ಹಾಗು ಸಚಿವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ.
ಸಚಿವರ ಆಪ್ತ ಸಿಬ್ಬಂದಿಯು ಶಾಸಕರುಗಳೊಂದಿಗೆ ಹಾಗೂ ಪಕ್ಷದ ಜಿಲ್ಲಾ ಕಚೇರಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಸಚಿವರ ಎಲ್ಲ ಪ್ರವಾಸ ಕಾರ್ಯಕ್ರಮವನ್ನು ಎಲ್ಲರ ಗಮನಕ್ಕೆ ತರುವುದು ಮತ್ತು ಕ್ಷೇತ್ರಗಳ ಕೆಲಸ ಕಾರ್ಯ ಹಾಗೂ ಸಾರ್ವಜನಿಕ ಕುಂದುಕೊರತೆ ಬಗ್ಗೆ ಪರಿಶೀಲಿಸಿ ಇವುಗಳನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿದ್ದ 8ಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ದೂರು ಕೊಟ್ಟಿದ್ದರು. ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಆಗುತ್ತಿಲ್ಲ, ಕ್ಷೇತ್ರದ ಕೆಲಸಗಳು ಆಗುತ್ತಿಲ್ಲ ಎಂದು ಆರೋಪಿಸಿದ್ದರು. ಈ ಬಗ್ಗೆ ಸಿಎಂ ಜೊತೆ ಮಾತುಕತೆ ನಡೆಸಿ ಸರಿಪಡಿಸುವ ಭರವಸೆಯನ್ನು ಕಟೀಲ್ ನೀಡಿದ್ದರು. ಅದರ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಅವರು ಸಚಿವರಿಗೆ ಪತ್ರ ಬರೆದು ಜಿಲ್ಲಾ ಪ್ರವಾಸದ ವೇಳೆ ಶಾಸಕರ ಅಹವಾಲು ಆಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.