ಬೆಂಗಳೂರು: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿಚಾರವಾಗಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಗೊಂದಲ ಬಗೆಹರಿಸುವಂತೆ ಸಚಿವರಿಗೆ ಸಿಎಂ ಸೂಚನೆ ಆನಂದ್ ರಾವ್ ಸರ್ಕಲ್ ಮೇಲ್ಸೇತುವೆ ನಾಮಕರಣ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ನಿನ್ನೆ ಸ್ವಾಮೀಜಿಯವರು ಬಂದಿದ್ದರು. ಅವರ ಜೊತೆ ಮಾತನಾಡಿದ್ದೇನೆ. ಯಾವುದೇ ಗೊಂದಲ ಇಲ್ಲದೆ ಸರಿಪಡಿಸಲು ನೀರಾವರಿ ಸಚಿವರು ಹಾಗೂ ಜಿಲ್ಲೆಯ ಉಸ್ತುವಾರಿ ಆಗಿರುವ ರಮೇಶ್ ಜಾರಕಿಹೊಳಿ ಸಭೆ ನಡೆಸುತ್ತಿದ್ದಾರೆ. ಸಮಸ್ಯೆ ಬಗೆಹರಿಯುತ್ತದೆ ಎಂದರು.
ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮಾತನಾಡಿ, ಪ್ರತಿಮೆ ಇಡಲು ಪಂಚಾಯತ್ ತೀರ್ಮಾನ ಆಗಿದೆ. ಸರ್ಕಾರಕ್ಕೆ ಕೂಡ ಕಳಿಸಿದ್ದಾರೆ. ಆದರೆ ಪೊಲೀಸ್ ಇಲಾಖೆಯಿಂದ ಆ ಸರ್ಕಲ್ನಲ್ಲಿ ತೊಂದರೆಯಾಗುತ್ತೆ ಅಂತ ತೊಡಕಿತ್ತೇ ಹೊರತು ಬೇರೆ ಏನೂ ಇಲ್ಲ. ಜಿಲ್ಲಾ ಮಂತ್ರಿಗಳು ಸಭೆ ಕರೆದಿದ್ದಾರೆ. ಮುಖಂಡರು ಭಾಗಿಯಾಗುತ್ತಾರೆ. ಚರ್ಚೆ ಬಳಿಕ ತೀರ್ಮಾನ ಆಗುತ್ತೆ. ನಿನ್ನೆ ನಮ್ಮ ಗುರುಪೀಠದ ನಿರಂಜನಾನಂದ ಸ್ವಾಮೀಜಿ ಸಿಎಂರನ್ನು ಭೇಟಿ ಮಾಡಿ, ಅಲ್ಲಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದರು.
ಸಂಗೊಳ್ಳಿ ರಾಯಣ್ಣ ಯಾವುದೇ ಒಂದು ಜಾತಿ, ಭಾಷೆಗೆ ಸೀಮಿತರಾದವರಲ್ಲ. ಹೀಗಾಗಿ ಪ್ರತಿಮೆ ಪ್ರತಿಷ್ಠಾಪನೆ ಆಗೇ ಆಗುತ್ತೆ. ಸ್ವಲ್ಪ ತಾಂತ್ರಿಕ ತೊಂದರೆಯಿಂದ ನಿಧಾನ ಆಗಿತ್ತು, ಬಗೆಹರಿಯುತ್ತದೆ ಎಂದರು.