ಬೆಂಗಳೂರು :ಜಿಲ್ಲಾ ಉಸ್ತುವಾರಿ ಸಚಿವರುಗಳು ಮುಂದಿನ ಎರಡು ವಾರಗಳಲ್ಲಿ ತಮ್ಮ ಉಸ್ತುವಾರಿ ಜಿಲ್ಲೆಯ ಪ್ರತಿ ತಾಲೂಕುಗಳಿಗೆ ಭೇಟಿ ನೀಡಿ, ಬರ ನಿರ್ವಹಣೆ ಸಂಬಂಧ ವರದಿ ನೀಡಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಈ ಸಂಬಂಧ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ, ರಾಜ್ಯದ 236 ತಾಲೂಕುಗಳ ಪೈಕಿ ಇದುವರೆಗೆ 216 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಬರದ ಹಿನ್ನೆಲೆಯಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರು, ಮೇವು, ಕೃಷಿ-ಕೈಗಾರಿಕೆಗಳಿಗೆ ನೀರು, ಬೆಳೆಹಾನಿ, ಜನರ ಉದ್ಯೋಗದ ಸ್ಥಿತಿ, ಬರ ಪರಿಹಾರ ವಿತರಣೆ ಮುಂತಾದ ಬರ ನಿರ್ವಹಣೆ ಕಾರ್ಯಕ್ರಮಗಳನ್ನು ಕೈಗೊಳ್ಳುವ ಕುರಿತು ಸಚಿವ ಸಂಪುಟ ಸಭೆಗಳಲ್ಲಿ ಚರ್ಚಿಸಲಾಗಿದೆ. ಹಾಗೂ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೂ ಹಲವು ಬಾರಿ ನಿರ್ದೇಶನಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವರುಗಳು ಮುಂದಿನ ಎರಡು ವಾರಗಳಲ್ಲಿ ತಮ್ಮ ಉಸ್ತುವಾರಿ ಜಿಲ್ಲೆಯ ಪ್ರತಿ ತಾಲೂಕುಗಳಿಗೆ ಭೇಟಿ ನೀಡಿ, ಕುಡಿಯುವ ನೀರು, ಮೇವು, ಉದ್ಯೋಗ, ಬೆಳೆಹಾನಿ, ಮುಂತಾದವುಗಳ ಸ್ಥಿತಿಗತಿಗಳ ಕುರಿತು ಪರಿಶೀಲಿಸಿ, ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ಮಾಹಿತಿ ಸಂಗ್ರಹಿಸುವುದು ಹಾಗೂ ಸ್ಥಳೀಯ ಶಾಸಕರೊಂದಿಗೆ ಗೋಶಾಲೆ, ಮೇವು ಬ್ಯಾಂಕ್, ಕುಡಿಯುವ ನೀರು, ಉದ್ಯೋಗ ಸೃಷ್ಟಿ ಮುಂತಾದ ಪರಿಹಾರ ಕ್ರಮಗಳ ಬಗ್ಗೆ ಸಮಾಲೋಚಿಸಿ ಅಗತ್ಯವಿರುವ ಕಡೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚನೆ ನೀಡಿದ್ದಾರೆ.