ಬೆಂಗಳೂರು: ಅಲ್ಪಸಂಖ್ಯಾತರ ಕಾಲೊನಿ ಅಭಿವೃದ್ಧಿಗೆ ಸಾವಿರ ಕೋಟಿ ರೂ.ಗಳ ಕ್ರಿಯಾ ಯೋಜನೆ ರೂಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಅವರು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಸತಿ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಕ್ರಿಯಾ ಯೋಜನೆ ತಯಾರಿಸುವ ಸಂದರ್ಭದಲ್ಲಿ ಅಲ್ಪಸಂಖ್ಯಾತರು ಹೆಚ್ಚಾಗಿ ನೆಲೆಸಿರುವ ಪ್ರದೇಶಗಳನ್ನು ಗುರುತಿಸಿ, ಅನುದಾನ ಹಂಚಿಕೆ ಮಾಡಬೇಕು ಎಂದರು. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ವಿದ್ಯಾರ್ಥಿ ವೇತನ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ಇದನ್ನು ಭರಿಸಲು ತೀರ್ಮಾನಿಸಿದೆ. 6.4 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆಗೆ ಸರ್ಕಾರ ಸಿದ್ಧವಾಗಿದೆ. ಆಯವ್ಯಯದಲ್ಲಿ 60 ಕೋಟಿ ರೂ. ನಿಗದಿಯಾಗಿದೆ. ಇಲಾಖೆಗೆ ಲಭ್ಯ ಅನುದಾನದಲ್ಲಿಯೇ ಮರುಹಂಚಿಕೆ ಮಾಡಿ ಹೆಚ್ಚುವರಿ 40 ಕೋಟಿ ರೂ ಭರಿಸಲು ಸಿಎಂ ತಿಳಿಸಿದರು.
ಅಲ್ಪಸಂಖ್ಯಾತರಿಗೆ ಸವಲತ್ತು ವಿತರಿಸುವ ವಿವಿಧ ಯೋಜನೆಗಳಿಗೆ ಆನ್‌ಲೈನ್ ಮೂಲಕ ಭಾರಿ ಪ್ರಮಾಣದಲ್ಲಿ ಅರ್ಜಿ ಸ್ವೀಕೃತವಾಗಿದೆ. ಹೀಗಾಗಿ, ಮುಂದಿನ ವರ್ಷ ಹೆಚ್ಚಿನ ಅನುದಾನ ಒದಗಿಸಲು ತೀರ್ಮಾನಿಸಲಾಯಿತು. ವಸತಿ ಇಲಾಖೆ ವಿವಿಧ ವಸತಿ ಯೋಜನೆಗಳಡಿ ಪ್ರಸಕ್ತ ಸಾಲಿನಲ್ಲಿ 3 ಲಕ್ಷ ಮನೆಗಳ ನಿರ್ಮಾಣದ ಗುರಿಗೆ ಎದುರಾಗಿ ಈವರೆಗೆ 1.31 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. ಮುಕ್ತಾಯದ ಹಂತದಲ್ಲಿರುವ 1.6 ಲಕ್ಷ ಮನೆಗಳನ್ನು ಮಾರ್ಚ್ ಒಳಗೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.