ಬೆಂಗಳೂರು: ಕಾವೇರಿ, ಮೇಕೆದಾಟು ಪಾದಯಾತ್ರೆ ಸೇರಿದಂತೆ ನಾಡಿನ ಹಿತರಕ್ಷಣೆಯ ಹೋರಾಟಗಳಲ್ಲಿ ಭಾಗವಹಿಸಿದ ಹೋರಾಟಗಾರರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯುವ ಸಂಬಂಧ ಕಡತವನ್ನು ಸಂಪುಟ ಸಭೆ ಮುಂದೆ ತರಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಈ ಕುರಿತು ಎಂಎಲ್ಸಿ ದಿನೇಶ್ ಗೂಳಿಗೌಡ ಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಸಿಎಂ, ಪ್ರಕರಣಗಳನ್ನು ಹಿಂಪಡೆಯುವ ವಿಚಾರವಾಗಿ ಸಚಿವ ಸಂಪುಟ ಉಪ ಸಮಿತಿಯ ಮುಂದೆ ಕಡತ ಮಂಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಕ್ಯಾಬಿನೆಟ್ ಮುಂದೆ ತರಬೇಕು ಎಂದು ಗೃಹ ಸಚಿವರಿಗೆ ತಿಳಿಸಿದ್ದಾರೆ.
ಮನವಿಯ ಅಂಶಗಳು: "ಈ ಹಿಂದೆ ನಾಡಿನ ನೆಲ, ಜಲ ಮತ್ತು ಭಾಷೆಯ ಹಿತರಕ್ಷಣೆಗಾಗಿ ಹಲವಾರು ಹೋರಾಟಗಳು ನಡೆದಿದ್ದವು. ಅಂಥ ಹೋರಾಟಗಳಲ್ಲಿ ಜನಪ್ರತಿನಿಧಿಗಳು, ಹಿರಿಯ ರಾಜಕಾರಣಿಗಳು, ಕನ್ನಡಪರ ಹೋರಾಟಗಾರರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು. ಕಾವೇರಿ ನೀರಿಗೆ ಸಂಬಂಧಿಸಿದಂತೆ ಮೇಕೆದಾಟು ಹಾಗೂ ಇನ್ನಿತರೆ ವಿಷಯಗಳಿಗೆ ಸಾಕಷ್ಟು ಧರಣಿಗಳು, ಪ್ರತಿಭಟನೆಗಳು ಹಾಗೂ ಪಾದಯಾತ್ರೆಗಳು ನಡೆದಿವೆ. ಅಂದಿನ ಬಿಜೆಪಿ ಸರ್ಕಾರವು ಹೋರಾಟದ ಕಿಚ್ಚನ್ನು ನಿಯಂತ್ರಿಸಲು ಶಾಸಕರು, ಮಾಜಿ ಶಾಸಕರು, ಹಿರಿಯ ರಾಜಕಾರಣಿಗಳು, ಮುಖಂಡರುಗಳು, ರೈತ ಹೋರಾಟಗಾರರು, ಕನ್ನಡ ಪರ ಸಂಘಟನೆಗಳು ಹಾಗೂ ಸಾರ್ವಜನಿಕರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲು ಮಾಡಿತ್ತು. ಇದರಿಂದಾಗಿ ಹಲವಾರು ಜನ ಇಂದಿಗೂ ವಿನಾಕಾರಣ ನ್ಯಾಯಾಲಯಗಳಿಗೆ ಅಲೆದಾಡುತ್ತಿದ್ದು, ಹೀಗಾಗಿ ಪ್ರಕರಣದಲ್ಲಿರುವವರು ಸೇರಿದಂತೆ ಕುಟುಂಬದವರು ಇದರಿಂದ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ."