ಬೆಂಗಳೂರು:ಅತಿ ಹೆಚ್ಚು ವಿಸ್ತಾರ ಹೊಂದಿದ ಕರ್ನಾಟಕದ ಹಚ್ಚ ಹಸಿರಿನ ಪಶ್ಚಿಮ ಘಟ್ಟ ಪ್ರದೇಶ ಸ್ವಿಟ್ಜರ್ಲೆಂಡ್ಗಿಂತಲೂ ಹೆಚ್ಚು ಸುಂದರವಾಗಿದೆ. ಆದರೆ ನಾವು ಅದನ್ನ ಸರಿಯಾಗಿ ಗುರುತಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ದಕ್ಷಿಣ ಭಾರತೀಯ ಹೋಟೆಲ್ ಮತ್ತು ರೆಸ್ಟೋರೆಂಟ್ಗಳ ಸಂಘದ ವಾರ್ಷಿಕ ಸಮ್ಮೇಳನವನ್ನು ಶುಕ್ರವಾರ ಸಂಜೆ ಉದ್ಘಾಟಿಸಿ ಹಾಗೂ ಪ್ರತಿಷ್ಠಿತ ರಾಮೋಜಿ ಫಿಲಂ ಸಿಟಿ ಸೇರಿದಂತೆ ಗಣ್ಯ ಹೋಟೆಲ್ ಉದ್ಯಮಿಗಳಿಗೆ "ಶಿರಾ" (ಸೌತ್ ಇಂಡಿಯಾ ಹೋಟೆಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಷನ್) ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಪ್ರವಾಸೋದ್ಯಮ ವಲಯದಲ್ಲಿ ಕರ್ನಾಟಕ ಒಳ್ಳೆಯ ಸೇವೆ ಸಲ್ಲಿಸುತ್ತಿದೆ. ನಾವು ಪ್ರವಾಸೋದ್ಯಮ ನೀತಿ ಹೊಂದಿದ್ದೇವೆ. ಕರಾವಳಿ ಭಾಗದ ಪ್ರವಾಸೋದ್ಯಮದ ಅಭಿೃದ್ಧಿಗೆ ಹೊಸ ಸಿಆರ್ಝಡ್ ನಿಯಮಾವಳಿಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕರ್ನಾಟಕದಲ್ಲಿ ಪ್ರಕೃತಿ ದತ್ತ ಬೀಚ್ಗಳಿದ್ದು, ಇವುಗಳ ಅಭಿವೃದ್ಧಿಗೆ ಈ ನಿಯಮಗಳು ಸಹಕಾರಿಯಾಗಲಿದೆ ಎಂದರು.
ದಕ್ಷಿಣ ಭಾರತೀಯ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳ ಸಂಘದ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಿಎಂ ಪ್ರವಾಸೋದ್ಯಮ ಸ್ಥಳಗಳ ಅಭಿವೃದ್ಧಿ:ರಾಜ್ಯದ ಅನೇಕ ಪ್ರವಾಸೋದ್ಯಮ ಸ್ಥಳಗಳನ್ನು ಅಭಿವೃದ್ಧಿ ಮಾಡಲಿದ್ದೇವೆ. ಅಂಜನಾದ್ರಿ ಹಾಗೂ ಜೋಗ ಜಲಪಾತ ಸೇರಿದಂತೆ ಒಟ್ಟು ಆರು ರೋಪ್ ವೇಗಳ ನಿರ್ಮಾಣವಾಗುತ್ತಿದೆ. ಕರ್ನಾಟಕ ಪ್ರಗತಿಪರ, ಸ್ನೇಹಮಯಿ ರಾಜ್ಯವಾಗಿದ್ದು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಆತಿಥ್ಯ ಪ್ರಮುಖ ಪ್ರಾತ್ರ ವಹಿಸುತ್ತದೆ. ಉತ್ತಮ ಆತಿಥ್ಯ ಜನರನ್ನು ಆಕರ್ಷಿಸುತ್ತದೆ ಮಾತ್ರವಲ್ಲದೇ ರಾಜ್ಯದ ಬಗ್ಗೆಯೂ ಉತ್ತಮ ಅಭಿಪ್ರಾಯ ಮೂಡಿಸುತ್ತದೆ. ಹಾಗಾಗಿ ಸಂಘದ ಬೇಡಿಕೆಗಳನ್ನು ಪರಿಗಣಿಸಲಾಗುವುದು. ಜತೆಗೆ ಜಿಎಸ್ಟಿಯಲ್ಲಿ ರಿಯಾಯಿತಿ ನೀಡುವ ಬಗ್ಗೆ ಪರಿಶೀಲಿಸಿ ತೀರ್ಮಾನಕ್ಕೆ ಬರಲಾಗುವುದು ಎಂದು ತಿಳಿಸಿದರು.
ಗಾಡ್ಸ್ ಮೋಸ್ಟ್ ಲವ್ಡ್ ಕಂಟ್ರಿ:ಒಂದು ರಾಜ್ಯ ಹಲವು ಜಗತ್ತು ಎಂಬ ರಾಜ್ಯದ ಪ್ರವಾಸೋದ್ಯಮ ಘೋಷ ವಾಕ್ಯಕ್ಕೆ 'ಗಾಡ್ಸ್ ಮೋಸ್ಟ್ ಲವ್ಡ್ ಕಂಟ್ರಿ' ಎಂದು ಹೊಸ ಟ್ಯಾಗ್ ಲೈನ್ ನೀಡಬೇಕು. ಹೊಸ ಆಲೋಚನೆ ಹೊಸ ವಿಚಾರಗಳೊಂದಿಗೆ ಬನ್ನಿ ನಮ್ಮ ಸರ್ಕಾರ ನಿಮಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದೆ ಎಂದು ಸಿಎಂ ಸಲಹೆ ನೀಡಿದರು.
ಪ್ರವಾಸೋದ್ಯಮ ಸರ್ಕಿಟ್: ಕರ್ನಾಟಕ, ತಮಿಳುನಾಡು, ಕೇರಳ ಎಲ್ಲ ರಾಜ್ಯಗಳು ಒಂದೇ ರೀತಿಯಲ್ಲಿ ಪ್ರವಾಸಿಗರನ್ನು ಸೆಳೆಯಬೇಕು. ನಮ್ಮಲ್ಲಿ ಧಾರ್ಮಿಕ ಸ್ಥಳಗಳೂ ಇವೆ. ಪ್ರವಾಸೋದ್ಯಮ ವಲಯದಲ್ಲಿ ಕರ್ನಾಟಕ ಒಳ್ಳೆಯ ಸೇವೆ ಸಲ್ಲಿಸುತ್ತಿದೆ. ಪ್ರವಾಸೋದ್ಯಮ ನೀತಿ ಹೊಂದಿದ್ದು, ಮೈಸೂರು ಹಾಗೂ ಹಂಪಿ ಪ್ರವಾಸಿ ಸರ್ಕಿಟ್ ಹೊಂದಲಿದ್ದೇವೆ. ಒಂದು ಟಿಕೆಟ್ನಲ್ಲಿ ಎಲ್ಲವನ್ನು ನೋಡುವ ವ್ಯವಸ್ಥೆ ಕಲ್ಪಿಸಲಾಗುವುದು. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜ್ಯ. ಬೆಂಗಳೂರನ್ನು ಎಲ್ಲರೂ ಪ್ರೀತಿಸುತ್ತಾರೆ. ಪ್ರತಿದಿನ ಐದರಿಂದ ಹತ್ತು ಸಾವಿರ ವಿಜ್ಞಾನಿಗಳು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಹೋಗುತ್ತಾರೆ. ವಿಶ್ವದ ಯಾವುದೇ ರಾಜ್ಯದಲ್ಲಿರದ 400 ಆರ್ ಆ್ಯಂಡ್ ಡಿ ಕೇಂದ್ರಗಳು ಬೆಂಗಳೂರಿನಲ್ಲಿವೆ. ದೇಶದಲ್ಲಿಯೇ ಅತಿ ಹೆಚ್ಚಿನ ಜನರು ಬಂದು ಹೋಗುವ ತಾಣ ಬೆಂಗಳೂರು ಎಂದರು.
ಬೆಂಗಳೂರು ಸಮಸ್ಯೆಗೆ ಶೀಘ್ರ ಪರಿಹಾರ:ಬೆಂಗಳೂರಿನ ಸಮಸ್ಯೆಗೆ ಪರಿಹಾರ ದೊರಕಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿಗೆ ನಿತ್ಯ ಲಕ್ಷಾಂತರ ಜನರು ಬರುತ್ತಿರುವುದರಿಂದ ಇಲ್ಲಿ ಹೂಡಿಕೆ ಹಾಗೂ ಕೆಲಸ ಮಾಡುವವರು ಹೆಚ್ವಿರುವುದರಿಂದ ಸಂಚಾರ ದಟ್ಟಣೆ ಸಾಮಾನ್ಯ. ರಾಜ್ಯದಲ್ಲಿ ಐದು ಹೊಸ ನಗರಗಳ ನಿರ್ಮಾಣ ಮಾಡಲು ತೀರ್ಮಾನಿಸಿದ್ದು, ನಗರದಲ್ಲಿ ಆಧುನಿಕ ಸೌಲಭ್ಯಗಳುಳ್ಳ ವ್ಯವಸ್ಥೆ ಕಲ್ಪಿಸಲಾಗುವುದು. ಇದನ್ನು ನಾವು ನವ ಕರ್ನಾಟಕ ಎಂದು ಕರೆಯುತ್ತೇವೆ. ಈ ವರ್ಷ ಮೂರು ವಿಮಾನ ನಿಲ್ದಾಣಗಳ ಆರಂಭಿಸಲಿದ್ದು, ಮುಂದಿನ ವರ್ಷ ಮತ್ತೆ ಮೂರು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲಿದ್ದೇವೆ. ದೂರದ ಸ್ಥಳಗಳನ್ನು ತಲುಪಲು ಏರ್ ಸ್ಟ್ರಿಪ್ಸ್ ನಿರ್ಮಾಣವಾಗಲಿದೆ ಎಂದು ಸಿಎಂ ಹೇಳಿದರು.
ಪ್ರವಾಸೋದ್ಯಮದ ಅಭಿವೃದ್ಧಿಗೆ ಯೋಜನೆ: ಪ್ರವಾಸೋದ್ಯಮ ಎಲ್ಲ ವ್ಯವಸ್ಥೆ ಕಲ್ಪಿಸಬೇಕು. ವಿವಿಧ ಕಾರಣಗಳಿಗಾಗಿ ಬರುವ ಜನರ ಅವಶ್ಯಕತೆಗಳನ್ನು ಪೂರೈಸುವ ವ್ಯವಸ್ಥೆಯತ್ತ ಗಮನಹರಿಸಬೇಕು. ಯೋಜನಾ ಬದ್ಧವಾಗಿ ಪ್ರವಾಸೋದ್ಯಮದ ಅಭವೃದ್ಧಿಗೆ ಯೋಜನೆ ರೂಪಿಸಿಕೊಳ್ಳಲು ಸಲಹೆ ನೀಡಿ ಪ್ರವಾಸೋದ್ಯಮಕ್ಕೆ ಯಾವುದೇ ಗಡಿಗಳ ಮಿತಿ ಇಲ್ಲ ಎಂದರು. ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಸಂಘದ ಅಧ್ಯಕ್ಷ ಕೆ.ಶ್ಯಾಮ್ ರಾಜು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ:2047ರ ಹೊತ್ತಿಗೆ ಭಾರತದಲ್ಲಿ 30 ಟ್ರಿಲಿಯನ್ ಡಾಲರ್ ಆರ್ಥಿಕತೆ: ಪಿಯೂಷ್ ಗೋಯಲ್