ಕರ್ನಾಟಕ

karnataka

ETV Bharat / state

ಬಡವರಿಗೆ ನಿವೇಶನ, ಮನೆ ಕಟ್ಟಲು ಕಾನೂನು ಸರಳೀಕರಣ: ಸಿಎಂ ಬೊಮ್ಮಾಯಿ

ಅಗ್ರಹಾರಪಾಳ್ಯದಲ್ಲಿ 1 ಲಕ್ಷ ಬಹುಮಹಡಿ ವಸತಿ ಯೋಜನೆಯ ಲೋಕಾರ್ಪಣೆ - ಇಂದು ಫಲಾನುಭವಿಗಳಿಗೆ 5 ಸಾವಿರ ಮನೆಗಳ ಹಂಚಿಕೆ - ನಿರ್ಮಾಣದ ಕೊನೆಯ ಹಂತದಲ್ಲಿರುವ 5 ಲಕ್ಷ ಮನೆಗಳು - ಸಿಎಂ ಬೊಮ್ಮಾಯಿ ಹೇಳಿಕೆ.

By

Published : Jan 31, 2023, 4:39 PM IST

multi storied residential project
ಬಹುಮಹಡಿ ವಸತಿ ಯೋಜನೆಯ ಲೋಕಾರ್ಪಣೆ

ಬಹುಮಹಡಿ ವಸತಿ ಯೋಜನೆಯ ಲೋಕಾರ್ಪಣೆ

ಬೆಂಗಳೂರು: ಬಡವರು ನಿವೇಶನ ಕೊಳ್ಳಲು ಹಾಗೂ ಗೃಹ ನಿರ್ಮಾಣ ಮಾಡಿಕೊಳ್ಳಲು ಅನುಕೂಲವಾಗುವಂತೆ ಕಾನೂನು ಸರಳೀಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಯಲಹಂಕ ತಾಲೂಕಿನ ಅಗ್ರಹಾರಪಾಳ್ಯದಲ್ಲಿ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯ ಲೋಕಾರ್ಪಣೆ ಮತ್ತು ವಸತಿಗಳ ಹಸ್ತಾಂತರ ಮಾಡಿ ಮಾತನಾಡಿದರು.

ಬರುವ ದಿನಗಳಲ್ಲಿ ರಾಜ್ಯದಲ್ಲಿ ಮನೆ ಕಟ್ಟುವುದು ಕಷ್ಟವಾಗಲಿದೆ. ಕಂದಾಯ ಕಾಯ್ದೆಯಲ್ಲಿ ಮನೆ ಕಟ್ಟಲು ನಿರ್ದಿಷ್ಟ ರಿಯಾಯಿತಿಗಳಿಲ್ಲ. ಭೂಮಿ ಬೆಲೆ ಹೆಚ್ಚಾಗಲು ಬೇಡಿಕೆ ಹೆಚ್ಚಾಗಿದೆ ಮತ್ತು ನಾವು ಮಾಡಿರುವ ಕಾನೂನುಗಳಿಂದ ಸಾಮಾನ್ಯ ಜನರು ನಿವೇಶನ ಖರೀದಿ ಮಾಡುವ ಪರಿಸ್ಥಿತಿಯಲ್ಲಿಲ್ಲ. ಹೀಗಾಗಿ ಮನೆ ಕಟ್ಟಲು ಅವಕಾಶ ಸಿಗುವಂತೆ ಕಾನೂನಿಗೆ ತಿದ್ದುಪಡಿ ತಂದು, ನಿರ್ಬಂಧಗಳನ್ನು ದೂರಮಾಡಿ ನೇರವಾಗಿ ಕೈಗೆಟುಕುವ ಬೆಲೆಯಲ್ಲಿ ಜಮೀನು ದೊರೆಯುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ವಸತಿಗಾಗಿಯೇ ಜಮೀನು ಪಡೆಯಲು, ಮನೆ ಕಟ್ಟಲು ಎಲ್ಲ ಕಾನೂನನ್ನು ಸರಳೀಕರಣ ಮಾಡಲಾಗುವುದು.‌ ಹಾಗಾದಾಗ ಬಡವರಿಗೆ ಮನೆ ಹಾಗೂ ನಿವೇಶನ ನೀಡಬಹುದು ಎಂದರು.

5 ಲಕ್ಷ ಮನೆಗಳು ಅಂತಿಮ ಹಂತದಲ್ಲಿ:ಆರು ವರ್ಷಗಳ ಹಿಂದೆ 15 ಲಕ್ಷ ಮನೆ ಕಟ್ಟುವುದಾಗಿ ಘೋಷಣೆಯಾಯಿತು. ಹಿಂದಿನ ಸರ್ಕಾರ ಚುನಾವಣೆ ಸಂದರ್ಭದಲ್ಲಿ 15 ಲಕ್ಷ ಮನೆ ಘೋಷಣೆ ಮಾಡಿದರು. ಅದಕ್ಕೆ ಹಣ ಮೀಸಲಿಡದೇ ಹೋದರು‌. 15 ಸಾವಿರ ಕೋಟಿ ರೂ. ಅಗತ್ಯವಿದ್ದರೆ, 3 ಸಾವಿರ ಕೋಟಿ ಮೀಸಲಿಟ್ಟರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಗತ್ಯ ಅನುದಾನ ಒದಗಿಸಿ ಸುಮಾರು 10 ಲಕ್ಷ ಮನೆಗಳನ್ನು ಕಟ್ಟುವ ಗುರಿ ಹೊಂದಿ ಇಂದು 5 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಕೊನೆಯ ಹಂತದಲ್ಲಿ ಇದ್ದೇವೆ ಎಂದು ತಿಳಿಸಿದರು.

ಯಲಹಂಕದಲ್ಲಿ ಒಟ್ಟು 900 ಮನೆ:ನಾನು ಮುಖ್ಯಮಂತ್ರಿಯಾದ ಬಳಿಕ ಸುಮಾರು 5 ಲಕ್ಷ ಮನೆಗಳ ಮಂಜೂರಾತಿ ಮಾಡಿದ್ದು, 4 ಲಕ್ಷ ಗ್ರಾಮೀಣ ಪ್ರದೇಶದಲ್ಲಿ ಹಾಗೂ 1 ಲಕ್ಷ ನಗರದಲ್ಲಿ ಮಂಜೂರಾತಿ ನೀಡಿದ್ದು, ಫಲಾನುಭವಿಗಳ ಆಯ್ಕೆಯಾಗಿ ಪ್ರಗತಿಯಲ್ಲಿದೆ. ನಾವು ಹೇಳಿದಂತೆ ನಡೆಯುತ್ತಿದ್ದೇವೆ. ಬೆಂಗಳೂರಿನಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಾಣ ಮಾಡಬೇಕು ಎಂದು ಏಳು ವರ್ಷಗಳಿಂದ ಪ್ರಯತ್ನ ಮಾಡಿದರೂ ಸಾಧ್ಯವಾಗಿರಲಿಲ್ಲ. ತರಾತುರಿಯಲ್ಲಿ ಘೋಷಣೆ ಮಾಡಲಾಗಿತ್ತು. ಜಮೀನು ಇದೆಯೋ ಇಲ್ಲವೋ ಎಂದು ಯೋಚಿಸಲಿಲ್ಲ. ಭೂಮಿಯೇ ಇಲ್ಲದೇ ಮನೆ ಕಟ್ಟುತ್ತೇವೆ ಎಂದು ಚುನಾವಣಾ ಘೋಷಣೆ ಮಾಡಿದರು. ನಾವು 50 ಸಾವಿರ ಮನೆಗಳಿಗೆ 492 ಎಕರೆ ಭೂಮಿಯನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಪಡೆದಿದ್ದು ಮನೆಗಳ ನಿರ್ಮಾಣ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದರು.

ಮೊದಲ ಹಂತದ 20 ಸಾವಿರ ಮನೆಗಳನ್ನು ಈಗ ಹಂಚಿಕೆ ಮಾಡಲಾಗುತ್ತಿದೆ. ಅದರಲ್ಲಿ 5 ಸಾವಿರ ಮನೆಗಳನ್ನು ಇಂದು ಹಂಚಿಕೆ ಮಾಡುತ್ತಿದ್ದು, ಯಲಹಂಕದಲ್ಲಿ ಒಟ್ಟು 900 ಮನೆಗಳನ್ನು ನೀಡಲಾಗುತ್ತಿದೆ. ಸುಮಾರು 5-6 ಕ್ಷೇತ್ರಗಳಲ್ಲಿ ಇಂದು ಮನೆಗಳ ಹಂಚಿಕೆಯಾಗುತ್ತಿದೆ. ಹಂತ ಹಂತವಾಗಿ 50 ಸಾವಿರ ಮನೆಗಳನ್ನು ಹಸ್ತಾಂತರ ಮಾಡುವ ಗುರಿ ಇದೆ ಎಂದು ತಿಳಿಸಿದರು.

ಜನೋಪಯೋಗಿ ಶಾಸಕ ಎಸ್​.ಆರ್​ ವಿಶ್ವನಾಥ್​:ಎಸ್​.ಆರ್​ವಿಶ್ವನಾಥ್​ ಅವರು ಜನೊಪಯೋಗಿ ಶಾಸಕರು. ಜನರ ಪರ ಕೆಲಸ ಮಾಡುವವರು ಮಾತ್ರ ಜನೋಪಯೋಗಿ ಶಾಸಕರಾಗುತ್ತಾರೆ. ಬೆಂಗಳೂರಿನ ಅಭಿವೃದ್ದಿ ಮಾಡುವ ಹೊಣೆಗಾರಿಕೆ ಅವರಿಗಿದೆ. ಬಿಡಿಎ ಅಧ್ಯಕ್ಷ ಸ್ಥಾನದ ಪ್ರಭಾವವನ್ನು ಯಲಹಂಕದ ಅಭಿವೃದ್ಧಿಗೆ ಬಳಸುತ್ತಿದ್ದಾರೆ. ವಿಶ್ವನಾಥ ಶಾಸಕರಾದ ಮೇಲೆ ಯಲಹಂಕ ಚಿತ್ರಣವೇ ಬದಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶ ಎರಡನ್ನೂ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಮುಂದಿನ 20 ವರ್ಷಗಳಲ್ಲಿ ಆಗುವ ಕೆಲಸವನ್ನು ಈಗಲೇ ಮಾಡಿದ್ದಾರೆ ಎಂದರು.

ಇದನ್ನೂ ಓದಿ:ಹಾಸನ ಕ್ಷೇತ್ರದ ಟಿಕೆಟ್ ಗೊಂದಲ ಸೃಷ್ಟಿಸಿದ ಭವಾನಿ ರೇವಣ್ಣ ಹೇಳಿಕೆ: ಜೆಡಿಎಸ್ ವರಿಷ್ಠರ ನಡೆ ಏನು?

ABOUT THE AUTHOR

...view details