ಬೆಂಗಳೂರು: ಕೊರೊನಾ ಎರಡನೇ ಅಲೆ ವ್ಯಾಪಕವಾಗುತ್ತಿರುವ ಹಿನ್ನೆಲೆ ಸಾರ್ವಜನಿಕ ಸ್ಥಳಗಳ ಸ್ಯಾನಿಟೈಸೇಷನ್ ಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಅದಕ್ಕಾಗಿ ಡ್ರೋಣ್ಗಳ ಬಳಕೆ ಮಾಡುತ್ತಿದೆ. ನಾಳೆಯಿಂದ ನಗರದಲ್ಲಿ ಏಳೆಂಟು ದಿನಗಳ ಕಾಲ ಡ್ರೋಣ್ ಮೂಲಕ ಸ್ಯಾನಿಟೈಸೇಷನ್ ಕಾರ್ಯ ನಡೆಯಲಿದೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮೂರು ಡ್ರೋಣ್ಗಳ ಮೂಲಕ ಸಾರ್ವಜನಿಕ ಸ್ಥಳಗಳ ಸ್ಯಾನಿಟೈಸೇಷನ್ ಮಾಡುವ ಕಾರ್ಯಾಚರಣೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು.
ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಡ್ರೋಣ್ ಮೂಲಕ ಸ್ಯಾನಿಟೈಸರ್ ಸಿಂಪಡಣೆ ಮಾಡಲಿದ್ದು, ಸಂಸದ ಪಿ ಸಿ ಮೋಹನ್ ಸ್ವಂತ ಖರ್ಚಿನಲ್ಲಿ ಚೆನ್ನೈ ಯಿಂದ ಡ್ರೋಣ್ ಗಳನ್ನು ತರಿಸಿದ್ದಾರೆ. ಗರುಡ ಏಜೆನ್ಸಿಯವರು ಉಚಿತವಾಗಿ ಸ್ಯಾನಿಟೈಸೇಷನ್ ಮಾಡಿಕೊಡುವ ಕಾರ್ಯ ನಡೆಸಿ ಸರ್ಕಾರದ ಕೊರೊನಾ ನಿಯಂತ್ರಣದ ಪ್ರಯತ್ನಕ್ಕೆ ಸಾಥ್ ನೀಡಲಿದ್ದಾರೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಡ್ರೋನ್ಗಳಿಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಯಡಿಯೂರಪ್ಪ, ಇಡೀ ದೇಶವೇ ಕೊರೊನಾ ಸಂಕಷ್ಟ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ತಂತ್ರಜ್ಞಾನದ ಮೂಲಕ ತುರ್ತಾಗಿ ಕೋವಿಡ್ ಔಷಧ ತಲುಪಿಸಲು ಡ್ರೋಣ್ ಗಳು ಕಾರ್ಯಾಚರಣೆಗೆ ಇಳಿದಿವೆ. ಸುಮಾರು 45 ಕೆಜಿ ಸಾಮಗ್ರಿ ತುಂಬಿ ಹಾರುವ ಡ್ರೋಣ್ ಗಳು ನಮ್ಮ ರಾಜ್ಯದಲ್ಲೂ ಸೇವೆ ಕೊಡುತ್ತಿವೆ. ಗರುಡ ಸಂಸ್ಥೆಯವರು ಈ ಡ್ರೋಣ್ ಸೇವೆ ಉಚಿತವಾಗಿ ಕೊಡುತ್ತಿದ್ದಾರೆ. ಸ್ಯಾನಿಟೈಸಿಂಗ್ ಅನ್ನೂ ಡ್ರೋಣ್ ಮೂಲಕ ಮಾಡಬಹುದು ಎಂದರು.
18 ವರ್ಷ ತುಂಬಿದವರಿಗೆ ನಾಳೆಯಿಂದ ಲಸಿಕೆ ಆರಂಭವಾಗದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಲಸಿಕೆಗಳು ನಮಗೆ ಪೂರೈಕೆ ಆಗಿಲ್ಲ. ಲಸಿಕೆಗಳು ಪೂರೈಕೆ ಆದ ಕೂಡಲೇ ಲಸಿಕೆ ಹಾಕುತ್ತೇವೆ. ಅವುಗಳ ಪೂರೈಕೆ ವಿಳಂಬ ಆಗುತ್ತಿದೆ. ಇಷ್ಟರೊಳಗೆ ನಮಗೆ ಲಸಿಕೆ ಸಿಗುತ್ತೆ ಅನ್ಕೊಂಡಿದ್ದೆವು. ಅದರಿಲ್ಲಿ ಅವು ಸಿಗೋದು ವಿಳಂಬ ಆಗಿದೆ. ಇದರಲ್ಲಿ ವೈಫಲ್ಯದ ಪ್ರಶ್ನೆ ಬರೋದಿಲ್ಲ ಎಂದು ಹೇಳಿದರು.
ಡ್ರೋನ್ ಮೂಲಕ ಸಾರ್ವಜನಿಕ ಸ್ಥಳಗಳ ಸ್ಯಾನಿಟೈಸೇಷನ್ಗೆ ಸಿಎಂ ಚಾಲನೆ ಮಾಧ್ಯಮಗಳ ವಿರುದ್ಧ ಸಿಎಂ ಗರಂ: ಕೇಂದ್ರದಿಂದ ವಿಳಂಬದ ಕುರಿತ ಪ್ರಶ್ನೆ ಕೇಳುತ್ತಲೇ, ಮಾಧ್ಯಮಗಳ ವಿರುದ್ಧ ಸಿಎಂ ಕೆಂಡಾಮಂಡಲರಾದರು. ಅನವಶ್ಯಕವಾಗಿ ನೀವು ಮೋದಿ ಹೆಸರು ತರಬೇಡಿ. ಕೇಂದ್ರ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಕೆಲವೇ ದಿನಗಳಲ್ಲಿ ಎಲ್ಲವೂ ಸರಿ ಹೋಗುವ ಭರವಸೆ ಇದೆ ಎಂದರು.
ಓದಿ:ಕಮಿಷನ್ ಹೊಡೆಯುವುದು ಸಾಕು, ಖಾಸಗಿ ಆಸ್ಪತ್ರೆಗಳ ಬಿಲ್ ಕ್ಲಿಯರ್ ಮಾಡಿ: ಡಿಕೆಶಿ