ಬೆಂಗಳೂರು: ಬಾಡಿಗೆಗೆ ಸೈಕಲ್ ಯೋಜನೆ ಮೈಸೂರಿನಲ್ಲಿ ಯಶಸ್ವಿಯಾಗಿದ್ದು, ಪರಿಸರ ಸ್ನೇಹಿ ಬಾಡಿಗೆ ಸೈಕಲ್ಗಳನ್ನು ಬಳಸಿ ಪರಿಸರದ ಮೇಲಿನ ದುಷ್ಪರಿಣಾಮ ಪರಿಹಾರಕ್ಕೆ ಅನುಕೂಲ ಆಗಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ .ಕುಮಾರಸ್ವಾಮಿ ಹೇಳಿದರು.
ಸೈಕಲ್ಗಳನ್ನು ಬಾಡಿಗೆಗೆ ನೀಡುವ ಟ್ರಿಣ್ ಟ್ರಿಣ್ ಯೋಜನೆಗೆ ವಿಧಾನಸೌಧದ ಮುಂಭಾಗದಲ್ಲಿ ಬಾಡಿಗೆಗೆ ಸೈಕಲ್ ಪಡೆದು ಜನರಿಗೆ ಹಸಿರು ಬಾವುಟ ತೋರಿಸುವ ಮೂಲಕ ಯೋಜನಗೆ ಮುಖ್ಯಮಂತ್ರಿ ಅಧಿಕೃತ ಚಾಲನೆ ನೀಡಿದರು. ನಂತರ ಸ್ವತಃ ಸೈಕಲ್ ಓಡಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಶಿವರಾತ್ರಿ ದಿನ ಪರಿಸರ ಸ್ನೇಹಿ ಬಾಡಿಗೆ ಸೈಕಲ್ ಯೋಜನೆಗೆ ಚಾಲನೆ ನೀಡಿದ್ದೇವೆ. 6 ಸಾವಿರ ಸೈಕಲ್ಗಳನ್ನು ಸಧ್ಯ ನೀಡಲಾಗಿದೆ. ನಗರ ಭೂ ಸಾರಿಗೆ ನಿರ್ದೇಶನಾಲಯ,ನಗರಾಭಿವೃದ್ಧಿ ಇಲಾಖೆ ಈ ಯೋಜನೆಯನ್ನು ಆರಂಭಿಸಿದ್ದು, ಮೈಸೂರಿನಲ್ಲಿ ಸಾರ್ವಜನಿಕರು ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು. ಮೈಸೂರಲ್ಲಿ ಈ ಯೋಜನೆ ಯಶಸ್ವಿಯಾಗಿದೆ. ಅದೇ ರೀತಿ ನಮ್ಮ ಬೆಂಗಳೂರಿನ ಜನರೂ ಕೂಡ ಬಾಡಿಗೆ ಸೈಕಲ್ಗಳನ್ನು ಹೆಚ್ಚು ಹೆಚ್ಚು ಬಳಸಬೇಕು ಎಂದು ಮನವಿ ಮಾಡಿದರು.
ನಗರದ ಆಯ್ದ ಸ್ಥಳದಲ್ಲಿ ಹಬ್ಗಳನ್ನು ಮಾಡಿ ಸೈಕಲ್ಗಳನ್ನು ಬಾಡಿಗೆ ನೀಡಲಾಗುತ್ತದೆ. ಆ್ಯಪ್ಗಳನ್ನು ಬಳಸಿ ಬಾಡಿಗೆ ಪಡೆಯಬಹುದು. ಇದರಿಂದ ನಮ್ಮ ಮೆಟ್ರೋಗೂ ಸಾಕಷ್ಟು ಅನುಕೂಲ ಆಗಲಿದೆ. ಸೈಕಲ್ ಬಾಡಿಗೆಗೆ ನೀಡುವುದು ಉತ್ತಮ ಬೆಳವಣಿಗೆ. ನಗರದ ನಾಗರಿಕರು ಸದ್ಬಳಕೆ ಮಾಡಿ ಕೊಂಡರೆ ವಾಹನ ದಟ್ಟಣೆ ಕಡಿವಾಣಕ್ಕೆ ಸಹಾಯವಾಗಲಿದ್ದು, ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳ ಪರಿಹಾರಕ್ಕೆ ಸುಲಭವಾದ ಮಾರ್ಗವನ್ನು ಕಂಡುಕೊಂಡಂತಾಗಲಿದೆ ಎಂದರು.