ಬೆಂಗಳೂರು :ಅಲಸಂಖ್ಯಾತರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಸಾಮಾಜಿಕ ನ್ಯಾಯದ ಜೊತೆ ಸಾಮಾಜಿಕ ಅಭಿವೃದ್ಧಿಯ ಗುರಿ ಸಾಧಿಸಲಾಗುವುದು. ಅಲ್ಪಸಂಖ್ಯಾತರ ಕೆಲ ಸಮುದಾಯಗಳು ಕಡು ಬಡತನದಲಿವೆ. ಅವರ ಅಭಿವೃದ್ಧಿಗೆ ಸೂಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನಾ ಅಬುಲ್ ಕಲಾಂ ಆಜಾದ್ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬದಲಾವಣೆಯ ಯುಗದಲ್ಲಿ ಬದಲಾವಣೆಯ ವೇಗವನ್ನು ಅಳವಡಿಸಿಕೊಂಡು ಅಲ್ಪಸಂಖ್ಯಾತರು ಗುರಿಯನ್ನು ಸಾಧಿಸಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರ ಹಾಗೂ ಸಮಾಜ ಮಕ್ಕಳಿಗೆ ಸೂಕ್ತ ಅವಕಾಶಗಳನ್ನು ಹಾಗೂ ಸವಲತ್ತುಗಳನ್ನು ಕಲ್ಪಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲು ಸಹಕರಿಸಬೇಕು ಎಂದರು.
ಅಲ್ಪಸಂಖ್ಯಾತರ ಮಕ್ಕಳಿಗೆ ಶಿಕ್ಷಣ, ವೃತ್ತಿ ಮಾರ್ಗದರ್ಶನ :ಅಲ್ಪಸಂಖ್ಯಾತ ಜನಾಂಗದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವ ಕಾರ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಆಗಬೇಕು. ಫ್ರೌಡ ಶಾಲಾ ಹಂತದಲ್ಲಿ ಮಕ್ಕಳಿಗೆ ಐಟಿ, ಇಂಜಿನಿಯರಿಂಗ್, ಐಟಿಐ, ಐಎಎಸ್, ಐಪಿಎಸ್ ಸೇರಿದಂತೆ ಮುಂತಾದ ಕ್ಷೇತ್ರದಲ್ಲಿನ ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ನೀಡಬೇಕು.