ಕರ್ನಾಟಕ

karnataka

By

Published : Oct 23, 2022, 3:18 PM IST

ETV Bharat / state

ಕೆಜಿಎಫ್ ಬಾಬು ನಿವಾಸಕ್ಕೆ ಸಿಎಂ ಇಬ್ರಾಹಿಂ ಭೇಟಿ.. ಜೆಡಿಎಸ್​ ಸೇರುವ ಬಗ್ಗೆ ಸಮಾಲೋಚನೆ

ಕೆಲ ತಿಂಗಳ ಹಿಂದೆ ವಿಧಾನಪರಿಷತ್​ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬೆಂಗಳೂರು ನಗರದಿಂದ ಸ್ಪರ್ಧಿಸಿದ್ದ ಕೆಜಿಎಫ್ ಬಾಬು (ಯೂಸುಫ್ ಷರೀಫ್) ಚುನಾವಣೆಗಾಗಿ ಸಾಕಷ್ಟು ಹಣವನ್ನು ವ್ಯಯಿಸಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋತಿದ್ದರು.

CM Ibrahim visits KGF Babu's residence
ಕೆಜಿಎಫ್ ಬಾಬು ನಿವಾಸಕ್ಕೆ ಸಿಎಂ ಇಬ್ರಾಹಿಂ ಭೇಟಿ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಅತೃಪ್ತ ನಾಯಕರನ್ನು ಸೆಳೆಯುವ ಕಾರ್ಯವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಮುಂದುವರಿಸಿದ್ದಾರೆ. 60 ಕ್ಷೇತ್ರಗಳಿಗೆ ಕಾಂಗ್ರೆಸ್​ಗೆ ಟಕ್ಕರ್ ಕೊಡಲು ಜೆಡಿಎಸ್ ಸಿದ್ಧಗೊಂಡಿದ್ದು, ಕಾಂಗ್ರೆಸ್ ಪಕ್ಷದ ಅತೃಪ್ತ ನಾಯಕ ಹಾಗೂ ಚಿಕ್ಕಪೇಟೆ ವಿಧಾನಸಭೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಕೆಜಿಎಫ್ ಬಾಬು ಅವರ ವಸಂತನಗರದ ನಿವಾಸಕ್ಕೆ ಸಿ ಎಂ ಇಬ್ರಾಹಿಂ ಭೇಟಿ ನೀಡಿ ಸಮಾಲೋಚನೆ ನಡೆಸಿದ್ದಾರೆ.

ಕೆಜಿಎಫ್ ಬಾಬು ಅವರಿಗೆ ಜೆಡಿಎಸ್ ಸೇರ್ಪಡೆಗೊಳ್ಳುವಂತೆ ಇಬ್ರಾಹಿಂ ಆಹ್ವಾನ ನೀಡಿದ್ದಾರೆ. ಮಾಜಿ ಶಾಸಕ ಆರ್ ವಿ ದೇವರಾಜ್ ಪುತ್ರ ಆರ್ ವಿ ಯುವರಾಜ್​ಗೆ ಈಗಾಗಲೇ ಟಿಕೆಟ್ ನೀಡುವ ಭರವಸೆಯನ್ನು ಕಾಂಗ್ರೆಸ್ ನಾಯಕರು ನೀಡಿದ್ದಾರೆ. ಪುತ್ರನ ಗೆಲುವಿಗಾಗಿ ಈಗಾಗಲೇ ದೇವರಾಜ್​ ಸಾಕಷ್ಟು ಕಾರ್ಯತಂತ್ರವನ್ನು ಸಹ ಹೆಣೆಯುತ್ತಿದ್ದಾರೆ ಎನ್ನಲಾಗ್ತಿದೆ.

ಕೆಲ ತಿಂಗಳ ಹಿಂದೆ ವಿಧಾನಪರಿಷತ್​ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬೆಂಗಳೂರು ನಗರದಿಂದ ಸ್ಪರ್ಧಿಸಿದ್ದ ಕೆಜಿಎಫ್ ಬಾಬು (ಯೂಸುಫ್ ಷರೀಫ್) ಚುನಾವಣೆಗಾಗಿ ಸಾಕಷ್ಟು ಹಣವನ್ನು ವ್ಯಯಿಸಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋತಿದ್ದರು. ಇದಾಗಿ ಕೆಲ ತಿಂಗಳು ಸುಮ್ಮನಿದ್ದ ಅವರು, ಚಿಕ್ಕ​ಪೇಟೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ಆರಂಭಿಸಿದ್ದಾರೆ.

ಇದಕ್ಕೂ ಮುನ್ನ ಪಕ್ಷದ ನಾಯಕರನ್ನು ಸಂಪರ್ಕಿಸದ ಹಿನ್ನೆಲೆ ಪಕ್ಷ ಸಹ ಇವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿತ್ತು. ಪಕ್ಷದ ನಾಯಕರ ಸೂಚನೆಯನ್ನು ಮೀರಿ ಚಿಕ್ಕಪೇಟೆಯಲ್ಲಿ ಸ್ಪರ್ಧಿಸುವ ಪ್ರಯತ್ನ ಮುಂದುವರಿಸಿರುವ ಕೆಜಿಎಫ್ ಬಾಬು, ಕಾಂಗ್ರೆಸ್ ಪಕ್ಷ ತಮಗೆ ಟಿಕೆಟ್ ನೀಡದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುವುದಾಗಿಯೂ ತಿಳಿಸಿದ್ದಾರೆ.

ಈ ಮಧ್ಯೆ ಚಿಕ್ಕಪೇಟೆಯಲ್ಲಿ ಸೂಕ್ತ ಅಭ್ಯರ್ಥಿಯ ಹುಡುಕಾಟ ನಡೆಸಿರುವ ಜೆಡಿಎಸ್ ನಾಯಕರು ಸಾವಿರ ಕೋಟಿ ಒಡೆಯ ಕೆಜಿಎಫ್ ಬಾಬುಗೆ ಈಗ ಗಾಳ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗುವುದು ಅಸಾಧ್ಯ. ಪಕ್ಷೇತರರಾಗಿ ಸ್ಪರ್ಧಿಸುವ ಬದಲು ಪ್ರಬಲ ಪ್ರಾದೇಶಿಕ ಪಕ್ಷವಾದ ಜೆಡಿಎಸ್​ನಿಂದ ಸ್ಪರ್ಧಿಸುವಂತೆ ಸಿ ಎಂ ಇಬ್ರಾಹಿಂ ಆಹ್ವಾನ ನೀಡಿದ್ದಾರೆ. ಕಾಂಗ್ರೆಸ್ ಸಹ ಟಿಕೆಟ್ ನೀಡುವ ನಿರೀಕ್ಷೆ ಇಲ್ಲದ ಹಿನ್ನೆಲೆ ಕೆಜಿಎಫ್ ಬಾಬು ಪಾಲಿಗೆ ಇದೊಂದು ಉತ್ತಮ ಆಯ್ಕೆ ಎಂದೇ ಬಿಂಬಿಸಲಾಗ್ತಿದೆ.

ಕೆಜಿಎಫ್ ಬಾಬು ಆಹ್ವಾನ:ಅಂದ ಹಾಗೆ ಸಿ ಎಂ ಇಬ್ರಾಹಿಂ ಇಂದು ಕೆಜಿಎಫ್ ಬಾಬು ಆಹ್ವಾನದ ಮೇರೆಗೆ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ತಾವೇ ಖುದ್ದು ಕಾರು ಕಳುಹಿಸಿ ತಮ್ಮದೇ ಕಾರಿನಲ್ಲಿ ಸಿ ಎಂ ಇಬ್ರಾಹಿಂ ಅವರನ್ನು ಮನೆಗೆ ಕರೆಸಿಕೊಂಡ ಕೆಜಿಎಫ್ ಬಾಬು ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:'ನಾನು ಜೆಡಿಎಸ್ ಬಿಟ್ಟು ಹೋಗಲ್ಲ..': ದೇವೇಗೌಡರೆದುರು ಕಣ್ಣೀರು ಹಾಕಿದ ಜಿಟಿಡಿ

ABOUT THE AUTHOR

...view details