ಬೆಂಗಳೂರು: ರಾಜ್ಯದಲ್ಲಿ ಜನತಾ ಪರಿವಾರವನ್ನು ಮರಳಿ ಕಟ್ಟುವ ಹಿರಿಯ ನಾಯಕ ಸಿ ಎಂ ಇಬ್ರಾಹಿಂ ಅವರ ಪ್ರಯತ್ನಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಹಲವು ಶಾಸಕರು, ಮಾಜಿ ಶಾಸಕರು ಬೆಂಬಲ ವ್ಯಕ್ತಪಡಿಸಿದ್ದು, ಸೂಕ್ತ ಕಾಲದಲ್ಲಿ ಮೂರನೇ ಶಕ್ತಿಯ ಜತೆ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲು ಮುಂದಾಗಿರುವ ಸಿ ಎಂ ಇಬ್ರಾಹಿಂ ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಹಲವು ಶಾಸಕರು, ಮಾಜಿ ಶಾಸಕರನ್ನು ಸಂಪರ್ಕಿಸಿದ್ದು, ಈ ಪೈಕಿ ಹಲವರು ಜನತಾ ಪರಿವಾರವನ್ನು ಕಟ್ಟುವ ಯತ್ನಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಜನತಾಪರಿವಾರದಲ್ಲಿದ್ದು ಹೊರಗೆ ಹೋಗಿರುವ ಹಲವರು ಈ ಯತ್ನಕ್ಕೆ ಬೆಂಬಲ ಸೂಚಿಸಿದ್ದಾರೆ. ಈಗಾಗಲೇ ತಮ್ಮ ಜೆಡಿಎಸ್ ಸೇರ್ಪಡೆ ಸಂಬಂಧ ರಾಜ್ಯಾದ್ಯಂತ ಇರುವ ತಮ್ಮ ಬೆಂಬಲಿಗರ ಜತೆ ಮಾತುಕತೆ ನಡೆಸುತ್ತಿರುವ ಸಿ ಎಂ ಇಬ್ರಾಹಿ, ಅದೇ ಕಾಲಕ್ಕೆ ಜನತಾ ಪರಿವಾರವನ್ನು ಒಂದುಗೂಡಿಸುವ ಪ್ರಯತ್ನದ ಕುರಿತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ವಿವರಿಸುತ್ತಲೇ ಇದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವೆ ಜನತಾ ಪರಿವಾರ ಎದ್ದು ನಿಲ್ಲದಿದ್ದರೆ ಜನ ಭ್ರಮನಿರಸನಗೊಳ್ಳುವ ಸ್ಥಿತಿ ಬರುತ್ತದೆ ಎಂಬ ಇಬ್ರಾಹಿಂ ಮಾತಿಗೆ ಹಲವರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆಡಳಿತರೂಢ ಬಿಜೆಪಿಯ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವಲ್ಲಿ ಕಾಂಗ್ರೆಸ್ ಪಕ್ಷ ನಿರೀಕ್ಷಿತ ಯಶ ಕಾಣುತ್ತಿಲ್ಲ.
ಬದಲಿಗೆ ಅದು ವಿಪಕ್ಷಗಳ ನಾಯಕರನ್ನೇ ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದೆ. ಇದರಿಂದಾಗಿ ಅಡುಗೆ ಅನಿಲದಿಂದ ಹಿಡಿದು ದಿನಬಳಕೆಯ ಎಲ್ಲ ಸಾಮಾಗ್ರಿಗಳ ದರ ಗಗನಕ್ಕೇರಿದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ನಡೆಯುತ್ತಲೇ ಇಲ್ಲ.