ಕರ್ನಾಟಕ

karnataka

By ETV Bharat Karnataka Team

Published : Nov 17, 2023, 6:45 PM IST

Updated : Nov 17, 2023, 7:35 PM IST

ETV Bharat / state

ಜೆಡಿಎಸ್‌ ಪಕ್ಷದಿಂದ ಸಿಎಂ ಇಬ್ರಾಹಿಂ ಅಮಾನತು

ಜೆಡಿಎಸ್ ಪಕ್ಷದಿಂದ ಸಿಎಂ ಇಬ್ರಾಹಿಂ ಅವರನ್ನು ಅಮಾನತುಗೊಳಿಸಲಾಗಿದೆ.

ಹೆಚ್. ಡಿ ದೇವೇಗೌಡ  ಸಿಎಂ ಇಬ್ರಾಹಿಂ
ಹೆಚ್. ಡಿ ದೇವೇಗೌಡ ಸಿಎಂ ಇಬ್ರಾಹಿಂ

ಬೆಂಗಳೂರು :ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆ ಸಿ ಎಂ ಇಬ್ರಾಹಿಂ ಅವರನ್ನು ಕೂಡಲೇ ಜಾರಿಗೆ ಬರುವಂತೆ ಜಾತ್ಯತೀತ ಜನತಾದಳ ಪಕ್ಷದಿಂದ ಅಮಾನತು ಮಾಡಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್. ಡಿ ದೇವೇಗೌಡರು ಆದೇಶ ಹೊರಡಿಸಿದ್ದಾರೆ.

ಅಮಾನತು ಆದೇಶ

ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ), ಹಿಂದಿನ ಮಹಾಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನ ಪರಿಷತ್ ಸದಸ್ಯ ಎಸ್. ಎಲ್ ಬೋಜೇಗೌಡ ಅವರು ದಿನಾಂಕ: 19-10-2023ರ ವರದಿಯಲ್ಲಿ ಕರ್ನಾಟಕ ರಾಜ್ಯ ಪರಿಷತ್‌ ಪ್ರಸ್ತುತ ಕಾರ್ಯಕಾರಿ ಸಮಿತಿ, ಪಕ್ಷದ ಸಂಘಟನೆ ಮತ್ತು ಬಲವರ್ಧನೆ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊಳಿಸಿರುವುದಿಲ್ಲ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಕೈಗೊಂಡಿರುವುದಿಲ್ಲ ಎಂದು ತಿಳಿಸಿದ್ದಾರೆ.

ಅಮಾನತು ಆದೇಶ

ಸಿ ಎಂ ಇಬ್ರಾಹಿಂ ಅವರು ಪಕ್ಷದ ಕಾರ್ಯಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿಲ್ಲ. ರಾಜ್ಯಾಧ್ಯಕ್ಷರು ಒಳಗೊಂಡಂತೆ ರಾಜ್ಯ ಪರಿಷತ್‌ನ ಕಾರ್ಯಕಾರಿ ಸಮಿತಿ ನಿಷ್ಕ್ರಿಯವಾಗಿರುವುದಾಗಿಯೂ ಸಹ ವರದಿಯಲ್ಲಿ ತಿಳಿಸಿದ್ದಾರೆ.

ಪಕ್ಷದ ಸಭೆಗಳಲ್ಲಿ ಪಕ್ಷದ ಹಿತದೃಷ್ಠಿಯಿಂದ ಮತ್ತು ಪಕ್ಷವನ್ನು ಸಂಘಟನೆ, ಬಲವರ್ದನೆ , ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಮೈತ್ರಿ/ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬ ವಿಚಾರದ ಬಗ್ಗೆ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ. ಈ ಹೊಂದಾಣಿಕೆ ಬಗ್ಗೆ ಬಿಜೆಪಿ ಮುಖಂಡರೊಂದಿಗೆ ಚರ್ಚಿಸಲು ಪಕ್ಷ ರಾಷ್ಟ್ರಾಧ್ಯಕ್ಷರು, ರಾಜ್ಯಾಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರಿಗೆ ಅಧಿಕಾರ ನೀಡಲು ತೀರ್ಮಾನಿಸಲಾಗಿದೆ. ಈ ಮೇಲಿನ ಸಭೆಗಳಲ್ಲಿ ಸಿ. ಎಂ ಇಬ್ರಾಹಿಂ ಅವರು ಉಪಸ್ಥಿತರಿದ್ದು, ಚರ್ಚೆಯಲ್ಲಿ ಮತ್ತು ತೀರ್ಮಾನದಲ್ಲಿ ಪಾಲುದಾರರಾಗಿದ್ದರು. ತದನಂತರ ಈ ತೀರ್ಮಾನದ ವಿರುದ್ಧ ವಿರೋಧಾಭಾಸದ ಹೇಳಿಕೆ ನೀಡುತ್ತಿರುವುದಾಗಿ ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷದ ರಾಜ್ಯಾಧ್ಯಕ್ಷರನ್ನೊಳಗೊಂಡ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಸಂವಿಧಾನದ ಸೆಕ್ಷನ್​ 10 ರನ್ವಯ ದಿನಾಂಕ:19-10-2023ರಂದು ವಿಸರ್ಜನೆ ಮಾಡಿ ಆದೇಶ ಹೊರಡಿಸಲಾಗಿದೆ.

ಅಮಾನತು ಆದೇಶ

ಇಬ್ರಾಹಿಂ ಅವರಿಂದ ಸಮಾನಂತರ ಸಭೆ ವಿಚಾರ:ನಂತರ ಹಿಂದಿನ ರಾಜ್ಯಾಧ್ಯಕ್ಷರಾದ ಸಿ.ಎಂ ಇಬ್ರಾಹಿಂ ಅವರು ಅಕ್ಟೋಬರ್ 16 ರಂದು ಬೆಂಗಳೂರಿನಲ್ಲಿ ಚಿಂತನ-ಮಂಥನ ಎನ್ನುವ ಹೆಸರಿನ ಪಕ್ಷದ ಸಮಾನಂತರ ಸಭೆಯನ್ನು ಕರೆದು, ಜೆಡಿಎಸ್ - ಬಿಜೆಪಿ ಹೊಂದಾಣಿಕೆ ಬಗ್ಗೆ ಸಭೆಯಲ್ಲಿ ವಿರೋಧ ವ್ಯಕ್ತಪಡಿಸುತ್ತಾ ಪಕ್ಷದ ರಾಷ್ಟ್ರಾಧ್ಯಕ್ಷರು ಮತ್ತು ರಾಜ್ಯ ಶಾಸಕಾಂಗ ಪಕ್ಷದ ನಾಯಕರ ವಿರುದ್ಧ ಬೇಜವಾಬ್ದಾರಿಯುತ ಹೇಳಿಕೆ ಮತ್ತು ಸುಳ್ಳು ಆರೋಪಗಳನ್ನು ಸಾರ್ವಜನಿಕವಾಗಿ ಮಾಡಿರುವುದು ವರದಿಯಾಗಿದೆ.

ಜನತಾದಳ (ಜಾತ್ಯತೀತ) ಪಕ್ಷದ ಜಿಲ್ಲಾಧ್ಯಕ್ಷರು ಮತ್ತು ಪಕ್ಷದ ರಾಜ್ಯ ಮಟ್ಟದ ವಿಭಾಗದ ಮುಖ್ಯಸ್ಥರನ್ನು ಉದ್ದೇಶಿಸಿ ಸಿ ಎಂ ಇಬ್ರಾಹಿಂ ಅವರು ನವೆಂಬರ್ 7ರಂದು ಬರೆದಿರುವ ಪತ್ರದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿಯ ರಾಜ್ಯಾಧ್ಯಕ್ಷರನ್ನು ಒಳಗೊಂಡಂತೆ ಪದಾಧಿಕಾರಿಗಳನ್ನು ವಿಸರ್ಜನೆ ಮಾಡಿರುವುದು ಕಾನೂನು ಬಾಹಿರ ಮತ್ತು ಏಕಪಕ್ಷೀಯ ನಿರ್ಧಾರ ಎಂದು ತಿಳಿಸಿ, ತಾನು ಇನ್ನೂ ರಾಜ್ಯಾಧ್ಯಕ್ಷನಾಗಿ ಮುಂದುವರೆದು, ಕಾರ್ಯನಿರ್ವಹಿಸುತ್ತಿರುವುದಾಗಿ, ಹಾಗಾಗಿ ಪಕ್ಷದ ಜಿಲ್ಲಾಧ್ಯಕ್ಷರು ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ತಮ್ಮ ಹುದ್ದೆಗಳಲ್ಲಿ ಮುಂದುವರೆದಿದ್ದಾರೆಂದು ತಿಳಿಸುತ್ತಾ, ಬಿಜೆಪಿ ಪಕ್ಷದೊಂದಿಗೆ ಹೊಂದಾಣಿಕೆ ಬಗ್ಗೆ ಒಲವು ಹೊಂದಿರುವವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಸೂಚಿಸಿದ್ದಾರೆ.

ಅಲ್ಲದೇ, ದಿನಾಂಕ: 15-11-2023 ರಂದು, ಕೇರಳ ರಾಜ್ಯದ ತಿರುವನಂತಪುರಂನಲ್ಲಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾದ ಸಿ. ಕೆ ನನು ಅವರು ಪಕ್ಷದ ಹೆಸರಿನಲ್ಲಿ ಅನಧಿಕೃತವಾಗಿ ಕರೆದಿದ್ದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿ, ರಾಜ್ಯದಲ್ಲಿನ ಜೆಡಿಎಸ್-ಬಿಜೆಪಿ ಹೊಂದಾಣಿಕೆ ಬಗ್ಗೆ ವಿರೋಧಬಾಸ ಹೇಳಿಕೆ ನೀಡಿ, ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದಾರೆ.

ಈ ಮೇಲಿನ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ ಪಕ್ಷದ ಹಿಂದಿನ ರಾಜ್ಯಾಧ್ಯಕ್ಷರಾದ ಸಿ.ಎಂ ಇಬ್ರಾಹಿಂ ಅವರು ಸಾರ್ವಜನಿಕವಾಗಿ ಪಕ್ಷದ ರಾಷ್ಟ್ರಾಧ್ಯಕ್ಷರ, ರಾಜ್ಯ ಶಾಸಕಾಂಗ ಪಕ್ಷದ ನಾಯಕರ ವಿರುದ್ಧ ಹಾಗೂ ರಾಜ್ಯದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದೊಂದಿಗೆ ಹೊಂದಾಣಿಕೆ ಬಗ್ಗೆ, ಪಕ್ಷದ ರಾಜ್ಯ ಪರಿಷತ್, ಶಾಸಕಾಂಗ ಪಕ್ಷದ ಸಭೆ, ಕೋ‌ ಸಮಿತಿ ಮುಂತಾದ ಸಭೆಗಳಲ್ಲಿ ಒಮ್ಮತವಾದ ನಿರ್ಣಯವಾಗಿದ್ದರೂ ಸಹ ಬಹಿರಂಗವಾಗಿ ಪಕ್ಷ ವಿರೋಧಿ ಹೇಳಿಕೆ ನೀಡಿ, ಪಕ್ಷದ ಹಿತಕ್ಕೆ ಧಕ್ಕೆ ತಂದಿರುತ್ತಾರೆ.

ಇಂತಹ ನಡವಳಿಕೆ ಮತ್ತು ಹೇಳಿಕೆಗಳು ಪಕ್ಷದ ವಿರೋಧಿ ಚಟುವಟಿಕೆಗಳಾಗಿರುತ್ತವೆ. ಹಾಗಾಗಿ, ಪಕ್ಷದ ಹಿತ ದೃಷ್ಠಿಯಿಂದ ಜನತಾದಳ (ಜಾತ್ಯತೀತ) ಪಕ್ಷದ ಸಂವಿಧಾನ ಮತ್ತು ನಿಯಮಾವಳಿಗಳ ಅಡಿಯಲ್ಲಿ Article XXII-Breach of Discipline-4 ಹಾಗೂ Punishment-6 ರನ್ವಯ ಸಿ. ಎಂ ಇಬ್ರಾಹಿಂ ಅವರನ್ನು ಈ ಕೂಡಲೇ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಜೆಡಿಎಸ್ ರಾಷ್ಟ್ರೀಯ ನಾಯಕರು ತಿಳಿಸಿದ್ದಾರೆ.

ಇದನ್ನೂ ಓದಿ:ಸಿಎಂ ಇಬ್ರಾಹಿಂ ಉಚ್ಚಾಟನೆಗೆ ವೇದಿಕೆ ಸಿದ್ಧವಾಗುತ್ತಿದೆಯೇ? ಕುತೂಹಲ ಮೂಡಿಸಿದ ಜೆಡಿಎಸ್ ಸಭೆ

Last Updated : Nov 17, 2023, 7:35 PM IST

ABOUT THE AUTHOR

...view details