ಬೆಂಗಳೂರು : 2ಬಿ ಮೀಸಲಾತಿ ರದ್ದು ಮಾಡಿರುವ ರಾಜ್ಯ ಸರ್ಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದರೆ ಸಾಲದು, ಆದೇಶವನ್ನೇ ರದ್ದು ಮಾಡಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಹೇಳಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಕರೆದಿದ್ದ ಪ್ರಚಾರ ಸಮಿತಿ ಸದಸ್ಯರ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಘೋಷಣೆ ಅಷ್ಟೇ ಮಾಡಿರೋದು ಅಂತ ಸರ್ಕಾರದ ವಕೀಲರೇ ಹೇಳಿದ್ದಾರೆ ಎಂದರು.
ಬಸವರಾಜ ಬೊಮ್ಮಾಯಿ ಅನುಭವಸ್ಥ ಅಲ್ಲ. ನಾನು ಅಧ್ಯಕ್ಷನಾಗಿದ್ದಾಗ, ಅವರು ಜನರಲ್ ಸೆಕ್ರೆಟರಿಯಾಗಿದ್ದರು. ಪಾಪ ಅವನ ಕೈಯಲ್ಲಿ ಬಿಜೆಪಿಯವರು ಮಾಡಿಸಿದ್ದಾರೆ. ದೇವೇಗೌಡರು ಧರ್ಮದ ಆಧಾರದಲ್ಲಿ ಮೀಸಲಾತಿ ಕೊಟ್ಟಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದಡಿ ಕೊಟ್ಟಿದ್ದಾರೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕು ಅಂತ ಸಂವಿಧಾನದಲ್ಲಿ ಹೇಳಿದ್ದಾರೆ. ಹಿಂದುಳಿದ ವರ್ಗದ ಸಮಿತಿಯ ವರದಿ ತಗೊಂಡು ದೇವೇಗೌಡರು ಮೀಸಲಾತಿ ಕೊಟ್ಟಿದ್ದರು. ಇಂದು ಬಿಜೆಪಿ ಆತುರವಾಗಿ ಮಾಡಿದೆ. ಸುಪ್ರೀಂಕೋರ್ಟ್ ಸರಿಯಾದ ದಾರಿ ತೋರಿಸಿದೆ. ಮೇ 10 ರ ನಂತರ ಇದು ಇರೋದೇ ಇಲ್ಲ ಎಂದು ಇಬ್ರಾಹಿಂ ಹೇಳಿದರು.
ಮೀಸಲಾತಿ ವಿಚಾರದಲ್ಲಿ ಇದೊಂದು ಅಸ್ವಾಭಾವಿಕೆ ಜನನವಾಗಿತ್ತು. ಈಗ ಅಸ್ವಾಭಾವಿಕ ಸಾವು ಆಗಿದೆ ಅಷ್ಟೇ. ನಾವು ಬಸವಣ್ಣ ಅವರ ತತ್ವ ಸಿದ್ಧಾಂತಗಳ ಮೇಲೆ ನಂಬಿಕೆಯುಳ್ಳವರು. ಹಿಂದುಳಿದ ಸಮಾಜ ನಮ್ಮದು. ನ್ಯಾಯಾಲಯಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಈ ವಿಚಾರದಲ್ಲಿ ಬಿಜೆಪಿಗೆ ಯಾವತ್ತೋ ಹಿನ್ನಡೆ ಆಗಿದೆ. ಹೈಕಮಾಂಡ್ ಯಾತ್ರೆ ಮಾಡುವ ಮೂಲಕ ಮತ ಕೇಳುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರು ಟೀಕಿಸಿದರು.