ಬೆಂಗಳೂರು: ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಸಿ.ಎಂ. ಇಬ್ರಾಹಿಂ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಸಂಜೆ ಭೋಜನಕ್ಕೆ ಸಿಎಂ ಇಬ್ರಾಹಿಂ ನೀಡಿದ ಆಹ್ವಾನವನ್ನು ಮನ್ನಿಸಿ ತೆರಳಿದ್ದ ಸಿದ್ದರಾಮಯ್ಯ ಅಲ್ಲಿ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸಿಎಂ ಇಬ್ರಾಹಿಂ ಹಿಂದೆ ಸಿದ್ದರಾಮಯ್ಯ ಅವರೊಂದಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ಸಿಗೆ ಆಗಮಿಸಿದ್ದರು.
ಆದರೆ ಇತ್ತೀಚಿನ ವರ್ಷಗಳಲ್ಲಿ ಪಕ್ಷದಲ್ಲಿ ಅಷ್ಟೊಂದು ಪ್ರಾಧಾನ್ಯತೆ ತಮಗೆ ಸಿಗದ ಹಿನ್ನೆಲೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿ ರಾಜ್ಯಾಧ್ಯಕ್ಷರಾಗುವ ಕನಸು ಕಂಡಿದ್ದರು. ಜೆಡಿಎಸ್ ರಾಷ್ಟ್ರೀಯ ನಾಯಕ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜೊತೆ ಹಲವು ಸುತ್ತು ಮಾತುಕತೆ ಕೂಡಾ ನಡೆಸಿದ್ದರು.
ಇದನ್ನೂ ಓದಿ:ರಾಸಲೀಲೆ ವಿಡಿಯೋ ಫೇಕ್, ಈ ಬಗ್ಗೆ ಸಮಗ್ರ ತನಿಖೆಯಾಗಲಿ: ಸಚಿವ ರಮೇಶ್ ಜಾರಕಿಹೊಳಿ
ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ಕೂಡ ನಿರಂತರವಾಗಿ ಇವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ನಡೆಸಿತ್ತು. ಇದರ ಭಾಗವಾಗಿಯೇ ಇಂದು ಸಿದ್ದರಾಮಯ್ಯ ಕೂಡ ಸಿಎಂ ಇಬ್ರಾಹಿಂ ರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ.
ಜೆಡಿಎಸ್ ಪಕ್ಷ ಮುಳುಗುತ್ತಿದ್ದಾಗ ನೆಲೆ ಕಂಡುಕೊಳ್ಳುವುದು ಕಷ್ಟ. ಸದ್ಯ ಕಾಂಗ್ರೆಸ್ ಪ್ರತಿಪಕ್ಷವಾಗಿದೆ. ಮುಂದಿನ ದಿನದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತದೆ. ಆಗ ತಮಗೆ ಸೂಕ್ತ ಸ್ಥಾನಮಾನ ನೀಡಲಾಗುವುದು. ಅಲ್ಲಿಯವರೆಗೂ ತಾವು ಪಕ್ಷ ಬಿಡುವ ನಿರ್ಧಾರ ಮಾಡಬೇಡಿ. ಇಲ್ಲಿ ಉತ್ತಮ ಅವಕಾಶಗಳು ಲಭಿಸಲಿವೆ. ಅಲ್ಪಸಂಖ್ಯಾತ ಸಮುದಾಯ ಬಹುವಾಗಿ ನೆಚ್ಚಿಕೊಂಡಿರುವುದು ಕಾಂಗ್ರೆಸ್ಸ ಪಕ್ಷವನ್ನು. ನಿಮ್ಮಂತಹ ನಾಯಕರೇ ಪಕ್ಷ ಬಿಟ್ಟರೆ ಹೇಗೆ? ಸ್ವಾತಂತ್ರ್ಯ ಬಂದ ದಿನದಿಂದಲೂ ತಮ್ಮ ಸಮುದಾಯಕ್ಕೆ ಗೌರವ ಹಾಗೂ ಪ್ರಾಧಾನ್ಯತೆ ನೀಡಿದ ಏಕೈಕ ಪಕ್ಷ ಕಾಂಗ್ರೆಸ್. ತಾವು ಈ ಪಕ್ಷವನ್ನು ಬಿಡಬೇಡಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ ಎಂಬ ಮಾಹಿತಿ ಇದೆ.