ಬೆಂಗಳೂರು:ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ನ ಹಿರಿಯ ಮುಖಂಡ ಸಿ.ಎಂ. ಇಬ್ರಾಹಿಂ ಅಸಮಾಧಾನ ಶಮನಕ್ಕೆ ಅವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ನನ್ನ ಹಾಗೂ ಕಾಂಗ್ರೆಸ್ ಸಂಬಂಧ ಮುಗಿಯಿತು ಎಂಬ ಸಿ.ಎಂ. ಇಬ್ರಾಹಿಂ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಬ್ರಾಹಿಂ ಅವರು ಹಿರಿಯ ನಾಯಕರು. ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಸಿದ್ದರಾಮಯ್ಯ ಅವರ ಕಾಲದಲ್ಲಿ ಹಾಲಿ ಶಾಸಕರನ್ನು ಬಿಟ್ಟು ಅವರಿಗೆ ಟಿಕೆಟ್ ನೀಡಲಾಗಿತ್ತು. ಅವರು ಸೋತ ನಂತರವೂ ಅವರಿಗೆ ಸಂಪುಟ ಸ್ಥಾನಮಾನ ನೀಡಿ ಯೋಜನಾ ಆಯೋಗದ ಮುಖ್ಯಸ್ಥರನ್ನಾಗಿ ಮಾಡಲಾಗಿತ್ತು. ಸತತ ಎರಡು ಬಾರಿ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲಾಗಿತ್ತು. ಅವರು ಪಕ್ಷದ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅಸಮಾಧಾನ ಇರುತ್ತದೆ, ಹೀಗಾಗಿ ಅವರು ಮಾತನಾಡಿದ್ದಾರೆ. ಅವರು ನಮ್ಮ ಸ್ನೇಹಿತರು, ನಮಗೆ ಒಳ್ಳೆಯದನ್ನು ಬಯಸಿದ್ದಾರೆ. ಪಕ್ಷಕ್ಕಾಗಿ ದುಡಿದಿದ್ದಾರೆ. ಖಂಡಿತವಾಗಿಯೂ ಅವರ ಜತೆ ಮಾತನಾಡುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದೆ ಎಂಬ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿ ಡಿಕೆಶಿ, ಅವರು ಕಾಂಗ್ರೆಸ್ ಪಕ್ಷದ ಸದಸ್ಯರು. ಪಕ್ಷ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದೆ. ಅವರು ನೋವಿನಿಂದ ಮಾತನಾಡಿದ್ದಾರೆ. ಅದನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು. ಕಾಂಗ್ರೆಸ್ನಲ್ಲಿ ಇಬ್ರಾಹಿಂ, ನಾನು, ಸಿದ್ದರಾಮಯ್ಯ ಸೇರಿದಂತೆ ಯಾರೂ ತಬ್ಬಲಿಯಾಗಿಲ್ಲ. ನಾವೆಲ್ಲಾ ಒಂದೇ ಎಂದು ಪುನರುಚ್ಚರಿಸಿದರು.