ಬೆಂಗಳೂರು:ನಮ್ಮದೇ ಒರಿಜಿನಲ್ ಜೆಡಿಎಸ್ ಎಂದು ಸಿ ಎಂ ಇಬ್ರಾಹಿಂ ಹೇಳಿದ್ದಾರೆ. ಆದರೆ, ಜೆಡಿಎಸ್ನಲ್ಲಿ ಸಿಎಂ ಇಬ್ರಾಹಿಂ ಬರೀ ನಾಮಕೇವಾಸ್ತೆ ಅಷ್ಟೇ. ಅವರ ಮಾತನ್ನು ಯಾರು ಕೇಳ್ತಾರೆ? ಜೆಡಿಎಸ್ ಅಂದರೆ ಅದು ದೇವೇಗೌಡರು. ಸಿಎಂ ಇಬ್ರಾಹಿಂ ಜೆಡಿಎಸ್ನಲ್ಲಿ ಲೆಕ್ಕಕ್ಕೆ ಇಲ್ಲ ಎಂದು ಹೊಸ ಮಿತ್ರಪಕ್ಷ ಜೆಡಿಎಸ್ ಪರ ಮಾಜಿ ಸಚಿವ ಆರ್ ಅಶೋಕ್ ವಕಾಲತ್ತು ವಹಿಸಿದ್ದಾರೆ.
ಫ್ರೀಡಂ ಪಾರ್ಕ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದೇ ಒರಿಜಿನಲ್ ಜೆಡಿಎಸ್ ಎಂಬ ಸಿ ಎಂ ಇಬ್ರಾಹಿಂ ಹೇಳಿಕೆಗೆ ಅಪಹಾಸ್ಯದಿಂದ ನಗುತ್ತಾ ಜೆಡಿಎಸ್ನಲ್ಲಿ ಸಿ ಎಂ ಇಬ್ರಾಹಿಂ ಅವರು ಬರೀ ನಾಮಕೇವಾಸ್ತೆ ಅಷ್ಟೇ. ಅವರ ಮಾತನ್ನು ಯಾರೂ ಕೇಳುವುದಿಲ್ಲ. ಜೆಡಿಎಸ್ ಅಂದರೆ ಅದು ದೇವೇಗೌಡರು. ಇದು ಇಡೀ ದೇಶಕ್ಕೆ, ರಾಜ್ಯಕ್ಕೇ ಗೊತ್ತಿದೆ. ಸಿಎಂ ಇಬ್ರಾಹಿಂ ಜೆಡಿಎಸ್ನಲ್ಲಿ ಲೆಕ್ಕಕ್ಕೇ ಇಲ್ಲದಿರುವಾಗ ಇಬ್ರಾಹಿಂ ಯಾರನ್ನೂ ಅಮಾನತು ಮಾಡಲು ಆಗುವುದಿಲ್ಲ. ಅಮಾನತು ಮಾಡಲು ಕಾರ್ಯಕಾರಿ ಸಮಿತಿ ಅನುಮತಿ ಬೇಕು. ಜೆಡಿಎಸ್ ಕಾರ್ಯಕಾರಿ ಸಮಿತಿ ಜೆಪಿ ಭವನದಲ್ಲಿದೆ ಎಂದರು.
ಈ ಸರ್ಕಾರ ತೆಲಂಗಾಣ ಮತ್ತು ಮಧ್ಯಪ್ರದೇಶವನ್ನು ದತ್ತು ತೆಗೆದುಕೊಂಡಿದೆ.! ಹೀಗಾಗಿ ಎರಡು ರಾಜ್ಯಗಳ ಚುನಾವಣೆಗೆ ಹಣ ಕಳುಹಿಸಿದೆ. ಟ್ರಕ್ನಲ್ಲಿ ಹಣ ಕಳುಹಿಸಿದೆ. ಕಂಟ್ರ್ಯಾಕ್ಟರ್ಬಳಿ ಹಣ ಸಂಗ್ರಹ ಮಾಡಿದೆ. ರಾಜ್ಯವನ್ನು ಲೂಟಿ ಮಾಡಿದೆ. ಇದು ಎಟಿಎಂ ಸರ್ಕಾರವಾಗಿದೆ. ಕಂಟ್ರ್ಯಾಕ್ಟರ್ ಕೇಳಿದಾಗ ಹಣ ಬಿಡುಗಡೆ ಮಾಡಿಲ್ಲ. ಚುನಾವಣೆಗೆ ಸರಿಯಾಗಿ ಹಣ ಬಿಡುಗಡೆ ಮಾಡಿದೆ ಎಂದು ದೂರಿದರು.