ಬೆಂಗಳೂರು:ಕಾಂಗ್ರೆಸ್ ಪಕ್ಷವನ್ನು ತೊರೆಯಲು ನಿರ್ಧರಿಸಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಎಮ್ಮೆಲ್ಸಿ ಸಿ.ಎಂ. ಇಬ್ರಾಹಿಂಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ್ದಾರೆ ಎನ್ನಲಾದ ದೊಡ್ಡ ಆಫರ್ ಇನ್ನಷ್ಟು ಗೊಂದಲಕ್ಕೆ ಸಿಲುಕಿಸಿದೆ. ಹೀಗಾಗಿ ಅವರು ತಮ್ಮ ಮುಂದಿನ ನಡೆಯ ಬಗ್ಗೆ ಸದ್ಯ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ತಿಳಿದು ಬಂದಿದೆ. ವಿಧಾನ ಪರಿಷತ್ ಸದಸ್ಯತ್ವ ಹಾಗೂ ಕೇಂದ್ರದ ಮಾಜಿ ಸಚಿವರೂ ಆಗಿರುವ ಸಿಎಂ ಇಬ್ರಾಹಿಂ ಅವರ ಪರಿಷತ್ ಕಾಲಾವಧಿ 2024ಕ್ಕೆ ಕೊನೆಗೊಳ್ಳಲಿದೆ.
ಇದನ್ನೇ ಆಧಾರವಾಗಿಟ್ಟುಕೊಂಡು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಶೇಷ ಯೋಜನೆ ರೂಪಿಸಿದ್ದು, ಪ್ರಮುಖ ಅಲ್ಪಸಂಖ್ಯಾತ ನಾಯಕನನ್ನು ಕಳೆದುಕೊಳ್ಳಲು ಸಿದ್ಧರಿಲ್ಲ. ಕಾಂಗ್ರೆಸ್ ಮತ ಬ್ಯಾಂಕ್ ಆಗಿರುವ ಮುಸಲ್ಮಾನ್ ಸಮುದಾಯದವರು ಇಬ್ರಾಹಿಂ ಪಕ್ಷ ಬಿಡುವುದರಿಂದ ಕೊಂಚ ಮಟ್ಟಿನ ಗೊಂದಲಕ್ಕೆ ಒಳಗಾಗಬಾರದು ಎಂದು ನಿರ್ಧರಿಸಿದ್ದಾರೆ. ಹೀಗಾಗಿ ವಿಧಾನ ಮಂಡಲ ಅಧಿವೇಶನ ಮುಗಿಯುತ್ತಿದ್ದಂತೆ ಇಬ್ರಾಹಿಂ ಭೇಟಿ ಮಾಡಿ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಈಗಾಗಲೇ ತಮ್ಮ ಆಪ್ತ ಹಾಗೂ ಮಾಜಿ ಸಚಿವ ಜಮೀರ್ ಅಹ್ಮದ್ ಅವರನ್ನು ಇಬ್ರಾಹಿಂ ನಿವಾಸಕ್ಕೆ ಕಳುಹಿಸಿಕೊಟ್ಟಿದ್ದ ಸಿದ್ದರಾಮಯ್ಯ ಸಚಿವ ಸ್ಥಾನ ನೀಡುವ ಭರವಸೆ ಕೊಟ್ಟಿದ್ದಾರೆ. ಸಿಎಂ ಇಬ್ರಾಹಿಂ ನಿವಾಸಕ್ಕೆ ತೆರಳಿದ್ದ ಸಂದರ್ಭ ಜಮೀರ್ ಅಹ್ಮದ್ ಭರವಸೆಯ ಮಾತನಾಡಿದ್ದು, ಸಿದ್ದರಾಮಯ್ಯ ನೀಡಿರುವ ಮಾಹಿತಿಯಂತೆ ತಮ್ಮನ್ನು ಅವರು ಭೇಟಿಯಾಗಲಿದ್ದಾರೆ. ಅಲ್ಲಿಯವರೆಗೆ ತಾಳ್ಮೆಯಿಂದ ಇರಿ ಎಂದು ಹೇಳಿದ್ದಾರೆ.
ಓದಿ:ಉಕ್ರೇನ್ ಮೇಲಿನ ರಷ್ಯಾ ದಾಳಿಗೆ 1 ತಿಂಗಳು: ಜಾಗತಿಕ ಪ್ರತಿಭಟನೆಗೆ ಝೆಲೆನ್ಸ್ಕಿ ಕರೆ
2023 ರಲ್ಲಿ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುವ ಅವಕಾಶ ಇದೆ. ಪರಿಷತ್ನ ಸಾಕಷ್ಟು ಹಿರಿಯ ಸದಸ್ಯರು ನಿವೃತ್ತಿಹೊಂದುವ ಹಿನ್ನೆಲೆ ಇರುವವರಲ್ಲಿ ಪ್ರತಿಪಕ್ಷ ನಾಯಕರನ್ನು ಹೊರತುಪಡಿಸಿದರೆ ತಮಗೇ ಎರಡನೇಯದಾಗಿ ಸಚಿವ ಸ್ಥಾನ ಸಿಗುವ ಅವಕಾಶ ಇದೆ. ದಯವಿಟ್ಟು ದುಡುಕಿ ನಿರ್ಧಾರ ಕೈಗೊಳ್ಳಬೇಡಿ. ತಮ್ಮ ಸದಸ್ಯತ್ವ ಅವಧಿ 2024ರವರೆಗೆ ಇದ್ದು, ಇನ್ನೊಂದು ಅವಧಿಗೆ ನವೀಕರಿಸಿಕೊಂಡು ಸರ್ಕಾರದಲ್ಲಿ ಪೂರ್ಣಾವಧಿ ಸಚಿವರಾಗುವ ಅವಕಾಶವಿದೆ. ಪಕ್ಷಕ್ಕಾಗಿ ದುಡಿದಿದ್ದೀರಿ. ಜೆಡಿಎಸ್ ತೊರೆದು ಸಿದ್ದರಾಮಯ್ಯ ಜತೆ ಬಂದಿದ್ದೀರಿ. ಅವರು ನಿಮಗೆ ಅವಕಾಶ ನೀಡುತ್ತಾರೆ. ಭರವಸೆ ಇಡಿ ಎಂದು ಮನವಿ ಮಾಡಿದ್ದಾರೆ ಎಂಬ ಮಾಹಿತಿ ಇದೆ.