ಬೆಂಗಳೂರು: ಪಠ್ಯಪುಸ್ತಕ ವಿವಾದ ಹಾಗೂ ಇಡೀ ಪರಿಷ್ಕೃತ ಪಠ್ಯ ವಾಪಸ್ಗೆ ಆಗ್ರಹಿಸಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ನಡೆಸಿದ್ದಾರೆ. ಪಠ್ಯದಲ್ಲಿರುವ ವಿವಾದಿತ ಅಂಶಗಳ ಕುರಿತು ಸಮಗ್ರವಾಗಿ ಪರಿಶೀಲಿಸಿ ಸರ್ಕಾರದ ಮುಂದಿರುವ ಆಯ್ಕೆಯ ಕುರಿತು ಸಮಾಲೋಚನೆ ನಡೆಸಿದರು.
ರೇಸ್ ಕೋರ್ಸ್ ರಸ್ತೆಯ ಸರ್ಕಾರಿ ನಿವಾಸದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಕುರಿತು ಚರ್ಚಿಸಲು ಕರೆದಿದ್ದ ತುರ್ತು ಸಭೆಯನ್ನು ಸರ್ಕಾರಿ ನಿವಾಸದಿಂದ ಆರ್.ಟಿ.ನಗರದ ಖಾಸಗಿ ನಿವಾಸಕ್ಕೆ ಸಿಎಂ ಸ್ಥಳಾಂತರಿಸಿದರು. ಸಿಎಂ ನಿರ್ದೇಶನದ ಮೇರೆಗೆ ಆರ್.ಟಿ ನಗರ ನಿವಾಸಕ್ಕೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಆಗಮಿಸಿದರು.
ಸಿಎಂಗೆ ಪಠ್ಯ ಪರಿಷ್ಕರಣೆ ಬಗ್ಗೆ ವರದಿ ನೀಡಿದ ಅಧಿಕಾರಿಗಳು, ಪಠ್ಯಪುಸ್ತಕದ ಯಾವ ಸಾಲುಗಳು ವಿವಾದಕ್ಕೆ ಕಾರಣವಾಗಿದೆ. ಯಾವುದನ್ನು ಕೈಬಿಡಲಾಗಿದೆ, ಯಾವುದನ್ನು ಸೇರಿಸಲಾಗಿದೆ ಅಂತ ಮಾಹಿತಿ ನೀಡಿದರು. ನಂತರ ಸಚಿವ ಬಿ.ಸಿ.ನಾಗೇಶ್ ಅವರಿಂದಲೂ ಮತ್ತಷ್ಟು ಮಾಹಿತಿ ಪಡೆದುಕೊಂಡರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಬರೆದಿರುವ ಪತ್ರದ ಬಗ್ಗೆಯೂ ಚರ್ಚೆ ನಡೆಸಲಾಯಿತು.
ಪಠ್ಯ ಪರಿಷ್ಕರಣೆ ಸಂಬಂಧ ದೇವೇಗೌಡರ ಸಲಹೆಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಸದ್ಯದ ಪರಿಸ್ಥಿತಿಯಲ್ಲಿ ಪರಿಷ್ಕೃತ ಪಠ್ಯ ವಾಪಸ್ ಕಷ್ಟಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಏನು ಮಾಡಬಹುದು ಎನ್ನುವ ಕುರಿತು ಚರ್ಚಿಸಲಾಯಿತು. ಯಾವ ಉತ್ತರವನ್ನು ಗೌಡರಿಗೆ ನೀಡಬೇಕು ಎನ್ನುವ ಕುರಿತು ಮಾತುಕತೆ ನಡೆಸಲಾಯಿತು.