ಕರ್ನಾಟಕ

karnataka

ETV Bharat / state

ತೆರಿಗೆ ಸಂಗ್ರಹಣಾ ಇಲಾಖೆ ಅಧಿಕಾರಿಗಳ ಜೊತೆ ಸಿಎಂ ಸುದೀರ್ಘ ಸಭೆ; ಗುರಿ ಸಾಧನೆಗೆ ಒತ್ತು - ನೋಂದಣಿ ಮತ್ತು ಮುದ್ರಾಂಕ ಇಲಾಖೆ

ವಿಧಾನಸೌಧದ ಸಮ್ಮೇಳನ‌ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ತೆರಿಗೆ ಸಂಗ್ರಹಣಾ ಇಲಾಖೆಗಳಾದ ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ ಇಲಾಖೆ, ಸಾರಿಗೆ ಇಲಾಖೆ ಮತ್ತು ನೋಂದಣಿ ಮತ್ತು ಮುದ್ರಾಂಕ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ತೆರಿಗೆ ಸಂಗ್ರಹಣಾ ಇಲಾಖೆಗಳ ಮ್ಯಾರಥಾನ್ ಸಭೆ

By

Published : Sep 11, 2019, 8:45 PM IST

ಬೆಂಗಳೂರು: ಆರ್ಥಿಕ ಹಿಂಜರಿತದಿಂದ ಸ್ವಲ್ಪ ಹಿನ್ನೆಡೆಯಾಗಿದ್ದರೂ ಇತರ ರಾಜ್ಯಗಳಿಗೆ ಹೋಲಿಸಿದರೆ ಉತ್ತಮ ಸ್ಥಿತಿಯಲ್ಲಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಇವತ್ತು ಅಧಿಕಾರಿಗಳಿಗೆ ತೆರಿಗೆ ಸಂಗ್ರಹದ ನಿಗದಿತ ಗುರಿ ಸಾಧನೆ ನಿಟ್ಟಿನಲ್ಲಿ ಹಲವು ಸಲಹೆಗಳನ್ನು ನೀಡಿದ್ದೇನೆ. ಅವರ ಸಮಸ್ಯೆಗಳಿಗೂ ಸ್ಪಂದಿಸುವ ಭರವಸೆ ಕೊಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ನಾವು ನಮ್ಮ ನಿಗದಿತ ಗುರಿ ಸಾಧಿಸುವ ವಿಶ್ವಾಸ ಹೊಂದಿದ್ದೇನೆ ಎಂದು ಮಾಹಿತಿ ನೀಡಿದರು.

ವಾಣಿಜ್ಯ ತೆರಿಗೆ ಇಲಾಖೆ:

ವಾಣಿಜ್ಯ ತೆರಿಗೆ ಇಲಾಖೆಯ ಈ ವರ್ಷದ ತೆರಿಗೆ ಸಂಗ್ರಹ ಗುರಿ 76,046 ಕೋಟಿ ರೂ. ಆಗಿದ್ದು, ಈವರೆಗೆ 33,618 ಕೋಟಿ ರೂ. ತೆರಿಗೆ ಸಂಗ್ರಹ ಆಗಿದೆ. ಇದು ವಾರ್ಷಿಕ ಗುರಿಯ ಶೇ. 44.2 ರಷ್ಟಿದೆ. ಕಳೆದ ವರ್ಷ ಇದೇ ಅವಧಿಯ ತೆರಿಗೆ ಸಂಗ್ರಹಕ್ಕೆ ಹೋಲಿಸಿದರೆ, ಶೇ. 20.3 ರಷ್ಟು ಹೆಚ್ಚಳವಾಗಿದೆ. ಜಿಎಸ್‍ಟಿ ತೆರಿಗೆ ಸಂಗ್ರಹದಲ್ಲಿಯೂ ಶೇ. 14.3 ರಷ್ಟು ಬೆಳವಣಿಗೆ ಆಗಿದೆ. ಜಿಎಸ್‍ಟಿ ಜಾರಿಯಾದಾಗ 4.51 ಲಕ್ಷ ಮಂದಿ/ ಕಂಪೆನಿಗಳು ಜಿಎಸ್‍ಟಿಯಡಿ ಹೆಸರು ನೋಂದಾಯಿಸಿಕೊಂಡಿದ್ದರು. ಈಗ ನೋಂದಣಿ ಮಾಡಿಕೊಂಡವರ ಸಂಖ್ಯೆ 8,16,573 ದಾಟಿದ್ದು, ಜಿಎಸ್‍ಟಿಯಲ್ಲಿ ನೋಂದಾಯಿಸಿಕೊಂಡವರ ಸಂಖ್ಯೆ ಸುಮಾರು ಶೇ. 100 ರಷ್ಟು ಹೆಚ್ಚಳವಾಗಿದೆ ಎಂದರು.

ತೆರಿಗೆ ಸಂಗ್ರಹವನ್ನು ಕಟ್ಟುನಿಟ್ಟಾಗಿ ನಿರ್ವಹಿಸಲಾಗುತ್ತಿದ್ದು, ವ್ಯಾಪಾರದ ಸ್ಥಳಕ್ಕೆ ಭೇಟಿ ನೀಡಿ ತೆರಿಗೆ ಸಂಗ್ರಹಿಸಲಾಗುತ್ತಿದೆ. ಜಿಎಸ್‍ಟಿ ಪಾವತಿಯಲ್ಲಿ ನಿರ್ಲಕ್ಷ್ಯ ತೋರಿದ 64 ಸಾವಿರಕ್ಕೂ ಹೆಚ್ಚು ಅಂಗಡಿಗಳ ಲೈಸನ್ಸ್‌ ​ರದ್ದುಪಡಿಸಲಾಗಿದೆ. ನಿಯಮಿತ ತಪಾಸಣೆ, ಫಾಲೋ ಅಪ್‍ಗಳ ಜೊತೆಗೆ ಇ-ವೇ ಬಿಲ್​​​​​ಗಳ ತಪಾಸಣೆಯನ್ನೂ ಕಟ್ಟುನಿಟ್ಟಾಗಿ ನಡೆಸುವ ಮೂಲಕ, ತೆರಿಗೆ ಸಂಗ್ರಹಣೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ತೆರಿಗೆ ಸಂಗ್ರಹಣಾ ಇಲಾಖೆಗಳ ಅಧಿಕಾರಿಗಳ ಜೊತೆ ಸಿಎಂ ಸುದೀರ್ಘ ಸಭೆ

ಈ ಸಾಲಿನಲ್ಲಿ 44 ಲಕ್ಷ ಇ-ವೇ ಬಿಲ್‍ಗಳನ್ನು ತಪಾಸಣೆ ಮಾಡಲಾಗಿದೆ. ಜಿಎಸ್‍ಟಿ ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ತೆರಿಗೆ ಸೋರಿಕೆಯಾಗದಂತೆ ಕ್ರಮವಹಿಸಲು ಸೂಚಿಸಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಒಟ್ಟಾರೆ ಬೆಳವಣಿಗೆ ಶೇ. 14.16 ರಷ್ಟಿದ್ದು, ಇತರ ರಾಜ್ಯಗಳಿಗಿಂತ ಉತ್ತಮ ಬೆಳವಣಿಗೆ ಆಗಿದೆ. ಆದರೆ ಇನ್ನೂ ಉತ್ತಮ ಸ್ಥಿತಿಗೆ ತರಬೇಕು ಎಂದು ಸೂಚನೆ ಕೊಟ್ಟಿದ್ದೇನೆ. ಬೆಳವಣಿಗೆ ದರ ನಿಶ್ಚಿತಗೊಳಿಸಲು ಎಲ್ಲ ಪ್ರಯತ್ನ ಮಾಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ.

ಜಿಎಸ್‍ಟಿ ಸಂರಕ್ಷಿತ ತೆರಿಗೆ ಮತ್ತು ವಾಸ್ತವ ತೆರಿಗೆ ಸಂಗ್ರಹದ ನಡುವಿನ ಅಂತರ ಕಡಿಮೆಗೊಳಿಸಲು ಶ್ರಮಿಸಬೇಕು ಎಂದು ಸಹ ತಿಳಿಸಿದ್ದೇನೆ. ವಿಭಾಗೀಯ ಜಂಟಿ ಆಯುಕ್ತರು, ರಾಜಸ್ವ ಸಂಗ್ರಹ ಕೊರತೆ ಆಗದಂತೆ ಎಚ್ಚರ ವಹಿಸಿ ಎಂದು ಸೂಚನೆ ನೀಡಿದ್ದೇನೆ. ಮೇಲ್ಮನವಿಗಳನ್ನು ಶೀಘ್ರ ವಿಲೇವಾರಿ ಮಾಡುವಂತೆಯೂ ಸೂಚಿಸಿದ್ದೇನೆ ಎಂದರು.

ಅಬಕಾರಿ ಇಲಾಖೆ:

ಅಬಕಾರಿ ಇಲಾಖೆಯಲ್ಲಿ 2019-2020ನೇ ಸಾಲಿಗೆ 20,950 ರೂ. ತೆರಿಗೆ ಸಂಗ್ರಹದ ಗುರಿ ನಿಗದಿ ಪಡಿಸಲಾಗಿದೆ. ಏಪ್ರಿಲ್ 1 ರಿಂದ ಆಗಸ್ಟ್ 30 ರ ವರೆಗೆ 9,145.36 ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದು, ಶೇ. 43.65 ರಷ್ಟು ಗುರಿ ಸಾಧನೆಯಾಗಿದೆ. ತೆರಿಗೆ ಸಂಗ್ರಹ ತೃಪ್ತಿಕರವಾಗಿದ್ದು, ವರ್ಷಾಂತ್ಯಕ್ಕೆ ನಿಗದಿತ ಗುರಿ ಸಾಧಿಸುವ ವಿಶ್ವಾಸವಿದೆ. ತೆರಿಗೆ ಸಂಗ್ರಹದಲ್ಲಿ ಕಳೆದ ವರ್ಷಕ್ಕಿಂತ 952.70 ಕೋಟಿ ರೂ. ಹೆಚ್ಚುವರಿ ಮೊತ್ತ ಸಂಗ್ರಹವಾಗಿದ್ದು, ಶೇ. 11.63 ರಷ್ಟು ಹೆಚ್ಚಳವಾಗಿದೆ ಎಂದರು.

ಸಾರಿಗೆ ಇಲಾಖೆ:

ಸಾರಿಗೆ ಇಲಾಖೆ ಹಾಗೂ ಸಾರಿಗೆ ನಿಗಮಗಳ ತೆರಿಗೆ ಸಂಗ್ರಹದ ವಾರ್ಷಿಕ ಗುರಿ 7,100 ಕೋಟಿ ರೂ. ಗಳಷ್ಟಿದ್ದು, ಆಗಸ್ಟ್ 30 ರ ವರೆಗೆ 2,750.82 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ನಿಗದಿ ಪಡಿಸಲಾಗಿತ್ತು. ಅದರಲ್ಲಿ 2,476 ಕೋಟಿ ರೂ. ತೆರಿಗೆ ಸಂಗ್ರವಾಗಿದ್ದು, ತೆರಿಗೆ ಸಂಗ್ರಹ ನಿಗದಿತ ಗುರಿಯ ಶೇ. 90 ರಷ್ಟಾಗಿದೆ. ವಾಹನ ಮಾರಾಟದಲ್ಲಿ ಸಾರಿಗೆ ಮತ್ತು ಸಾರಿಗೇತರ ವಾಹನಗಳ ನೋಂದಣಿಯಲ್ಲಿ ಶೇ. 10.34 ರಷ್ಟು ಕಡಿಮೆಯಾಗಿದೆ. ಇದರಿಂದಾಗಿ ತೆರಿಗೆ ಸಂಗ್ರಹದಲ್ಲಿ ವ್ಯತ್ಯಯವಾಗಿದೆ. ಅಕ್ಟೋಬರ್ ನಂತರ ಸುಧಾರಣೆಯಾಗುವ ನಿರೀಕ್ಷೆ ಇದೆ. ಸಂಚಾರ ನಿಯಮ ಹಾಗೂ ಮೋಟಾರು ವಾಹನ ಕಾಯಿದೆ ಉಲ್ಲಂಘನೆಗೆ ಸಂಬಂಧಿಸಿದಂತೆ ದಂಡದ ಮೊತ್ತವನ್ನು ಇಳಿಸುವ ಬಗ್ಗೆ ಗುಜರಾತ್ ಸರ್ಕಾರ ಹೊರಡಿಸಿರುವ ಆದೇಶವನ್ನು ತರಿಸಿಕೊಂಡು ಪರಿಶೀಲಿಸಿ, ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ನೋಂದಣಿ ಮತ್ತು ಮುದ್ರಾಂಕ ಇಲಾಖೆ:

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ತೆರಿಗೆ ಸಂಗ್ರಹದ ವಾರ್ಷಿಕ ಗುರಿ 11,828 ಕೋಟಿ ರೂ. ಗಳಷ್ಟಿದ್ದು, ಆಗಸ್ಟ್ 30 ರ ವರೆಗೆ 4,574.51 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ನಿಗದಿ ಪಡಿಸಲಾಗಿತ್ತು. ಅದರಲ್ಲಿ 4620.30 ಕೋಟಿ ರೂ. ತೆರಿಗೆ ಸಂಗ್ರವಾಗಿದ್ದು, ಶೇ. ಶೇ.. 101.1 ರಷ್ಟಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸಂಗ್ರಹವಾದ ತೆರಿಗೆಗಿಂತ 530. 27 ಕೋಟಿ ರೂ. ತೆರಿಗೆ ಹೆಚ್ಚಳವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆಸ್ತಿ ನೋಂದಣಿಯಲ್ಲಿ ಬೆಂಗಳೂರಿನಲ್ಲಿ ಶೇ. 3.86 ರಷ್ಟು ಹೆಚ್ಚಳವಾಗಿದೆ. ವಿವಿಧ ಸೇವೆಗಳನ್ನು ಆನ್‍ಲೈನ್‍ನಲ್ಲಿ ಒದಗಿಸುತ್ತಿರುವುದು ತೆರಿಗೆ ಸಂಗ್ರಹಕ್ಕೆ ಪೂರಕವಾಗಿದೆ ಎಂದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆ:

ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ 2019-20ನೇ ಸಾಲಿಗೆ 3550 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ಇತ್ತು. ಅದರಲ್ಲಿ ಒಟ್ಟು 1314 ಕೋಟಿ ರೂ. ಅಂದರೆ ಶೇ. 37 ರಷ್ಟು ರಾಜಸ್ವ ಸಂಗ್ರಹ ಆಗಿದೆ. ಆರ್ಥಿಕ ವರ್ಷದ ಅಂತ್ಯದ ವೇಳೆಗೆ ನಿಗದಿತ ಗುರಿ ಸಾಧಿಸುವ ವಿಶ್ವಾಸ ಇದೆ ಎಂದರು.

ರಾಜ್ಯದಲ್ಲಿ ಮರಳು ಮಾಫಿಯಾ ಮಟ್ಟಹಾಕಿ ಜನಸಾಮಾನ್ಯರಿಗೆ ಸುಲಭ ದರದಲ್ಲಿ ಮರಳು ಒದಗಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ.ಜನಸಾಮಾನ್ಯರಿಗೆ ಸುಲಭವಾಗಿ ಮರಳು ಸಿಗುವಂತೆ ಮಾಡುತ್ತೇವೆ ಜನರಿಗೆ ಮರಳು ಸುಲಭವಾಗಿ ಸಿಗಬೇಕು ಮಲೇಷ್ಯಾ ಮರಳು ತರಿಸಿಕೊಳ್ಳುವ ಅಗತ್ಯವಿಲ್ಲ ಮಲೇಷ್ಯಾ ಮರಳು‌ ಬಗ್ಗೆ ಹಿಂದಿನ ಸರ್ಕಾರದ ಬಗ್ಗೆ ಟೀಕೆ ಮಾಡಲ್ಲ ನಾನು ನಮ್ಮಲ್ಲೇ ಯಥೇಚ್ಛ ಮರಳು ಸಿಕ್ತಿದೆ ನಮ್ಮಲ್ಲಿ ಸಿಗುತ್ತಿರುವ ಮರಳು ಜನರಿಗೆ ಸಾಕು ಎಂದರು.

ABOUT THE AUTHOR

...view details