ಬೆಂಗಳೂರು: ಬಜೆಟ್ ಮಂಡನೆಗೆ ಪೂರ್ವ ಸಿದ್ಧತೆ ಮಾಡಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇಲಾಖಾವಾರು ಪೂರ್ವಭಾವಿ ಸಭೆ ಮುಂದುವರೆಸಿದ್ದು, ಇಂದು ಐದು ಇಲಾಖೆಯೊಂದಿಗೆ ಸಭೆ ನಡೆಸಿದರು.
ಓದಿ: ಫೆ.14 ರಿಂದ 2ನೇ ಹಂತದ ಲಸಿಕೆ ನೀಡಿಕೆ ಆರಂಭ; ಕಡ್ಡಾಯವಾಗಲಿದೆಯಾ ಕೋವಿಡ್ ಲಸಿಕೆ?
ರೇಸ್ ಕೋರ್ಸ್ ರಸ್ತೆಯಲ್ಲಿರುವ ಶಕ್ತಿಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಸಣ್ಣ ಕೈಗಾರಿಕೆ, ಸಕ್ಕರೆ, ಜವಳಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಸಚಿವರ ಜತೆ ಚರ್ಚೆ ನಡೆಸಿದರು.
ಕಳೆದ ಬಜೆಟ್‌ನಲ್ಲಿ ಘೋಷಣೆಯಾಗಿ ಬಾಕಿ ಉಳಿದಿರುವ ಯೋಜನೆಗಳ ಕುರಿತು ಮುಖ್ಯಮಂತ್ರಿಗಳು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ವೆಚ್ಚವಾಗದ ಅನುದಾನದ ಬಗ್ಗೆಯೂ ಚರ್ಚಿಸಿ ಮುಂದಿನ ಬಜೆಟ್‌ನಲ್ಲಿ ಮುಂದುವರೆಸುವ ಕುರಿತು ಸಮಾಲೋಚನೆ ನಡೆಸಿದ್ದಾರೆ.
ಇಲಾಖೆಗಳ ಸಚಿವರು ಹೊಸ ಯೋಜನೆಗಳ ಪ್ರಸ್ತಾಪವನ್ನು ಮುಖ್ಯಮಂತ್ರಿಗಳ ಮುಂದಿಟ್ಟರು. ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಅಗತ್ಯ ಇರುವ ಕಾರಣ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಕೋರಿದ್ದಾರೆ.
ಆರ್ಥಿಕ ಇಲಾಖೆಯೊಂದಿಗೆ ಅಂತಿಮವಾಗಿ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿರುವ ಕಾರಣ ಪ್ರಮುಖ ಯೋಜನೆಗಳನ್ನು ಮಾತ್ರ ಪರಿಗಣಿಸಲಾಗುವುದು. ಆರ್ಥಿಕ ಪರಿಸ್ಥಿತಿ ಮತ್ತಷ್ಟು ಸುಧಾರಣೆ ಕಂಡ ಬಳಿಕ ಮುಂದಿನ ದಿನಗಳಲ್ಲಿ ಇತರೆ ಯೋಜನೆಗಳ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಎನ್ನಲಾಗಿದೆ.