ಬೆಂಗಳೂರು:ಎಲ್ಲ ಇಲಾಖೆಗಳಿಂದ ಒಟ್ಟು 1,17,044 ಕೋಟಿ ರೂಪಾಯಿ ತೆರಿಗೆ ಸಂಗ್ರಹದ ಗುರಿ ಹೊಂದಿದ್ದು, ನೂರಕ್ಕೆ ನೂರರಷ್ಟು ಗುರಿ ಮುಟ್ಟಲಿದ್ದೇವೆ ಎಂದು ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿಎಂ ನೇತೃತ್ವದಲ್ಲಿ ವಿಧಾನಸೌಧದಲ್ಲಿ ತೆರಿಗೆ ಸಂಗ್ರಹಣಾ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ ಇಲಾಖೆ, ಸಾರಿಗೆ ಇಲಾಖೆ, ನೋಂದಣಿ ಮತ್ತು ಮುದ್ರಾಂಕ, ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಈ ವರ್ಷ ನಾವು 1,17,044 ಕೋಟಿ ರೂ. ಗುರಿ ಹೊಂದಿದ್ದೇವೆ. ಬೇರೆ ಇಲಾಖೆಗಳಿಂದ ಹೆಚ್ಚು ತೆರಿಗೆ ಸಂಗ್ರಹ ಮಾಡಿ, ಎಲ್ಲಿ ಕೊರತೆ ಆಗುತ್ತದೆಯೋ ಅದನ್ನು ಸರಿದೂಗಿಸಲಿದ್ದೇವೆ. ಆ ಮೂಲಕ ಈ ಗುರಿ ಮುಟ್ಟಲೇಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನೂರಕ್ಕೆ ನೂರರಷ್ಟು ಈ ಗುರಿ ಮುಟ್ಟಲು ಎಲ್ಲ ಸಾಧ್ಯ ಪ್ರಯತ್ನಗಳನ್ನು ಮಾಡಲಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ವಾಣಿಜ್ಯ ತೆರಿಗೆ ಇಲಾಖೆಗೆ 76,046 ಕೋಟಿ ರೂ. ತೆರಿಗೆ ಸಂಗ್ರಹ ಗುರಿ ಇದ್ದು, ಡಿಸೆಂಬರ್ 2019 ರ ಅಂತ್ಯದವರೆಗೆ 55,984 ಕೋಟಿ ರೂ. ತೆರಿಗೆ ಸಂಗ್ರಹ ಆಗಿದ್ದು, ಶೇ. 73.6 ರಷ್ಟು ಸಾಧನೆ ಆಗಿದೆ. ಇನ್ನು, ಜಿಎಸ್‍ಟಿ ಸಂಗ್ರಹದಲ್ಲಿ ಇಲ್ಲಿಯವರೆಗೆ ರಾಜ್ಯದ ಸಾಧನೆ 61,245 ಕೋಟಿ ರೂ. ಇದ್ದು, ರಾಷ್ಟ್ರದಲ್ಲೇ ಎರಡನೇ ಸ್ಥಾನದಲ್ಲಿದ್ದೇವೆ. ರಾಜ್ಯದ ಜಿಎಸ್‍ಟಿ ಬೆಳವಣಿಗೆ ಶೇ. 14.2 ರಷ್ಟು ಇದೆ ಎಂದು ತಿಳಿಸಿದರು.
ತಡವಾಗಿ ಜಿಎಸ್‍ಟಿ ರಿಟರ್ನ್ ಫೈಲ್ ಮಾಡುವ ಮತ್ತು ರಿಟರ್ನ್ ಫೈಲ್ ಮಾಡದೇ ಇರುವವರ ವ್ಯಾಪಾರ ಸ್ಥಳಗಳಿಗೇ ಭೇಟಿ ನೀಡಿ 551.44 ಕೋಟಿ ತೆರಿಗೆ ಸಂಗ್ರಹಿಸಲಾಗಿದೆ. 2020ರ ಎಪ್ರಿಲ್ 1ರಿಂದ ಹೊಸ ಜಿಎಸ್‍ಟಿ ರಿಟರ್ನ್ ನಮೂನೆ ಜಾರಿಗೆ ಬರಲಿದೆ. ಹೊಸ ನಮೂನೆಯನ್ನು ತೆರಿಗೆದಾರರಲ್ಲಿ ಜನಪ್ರಿಯಗೊಳಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಸಿಎಂ ವಿವರಿಸಿದರು.
ಅಬಕಾರಿ ಇಲಾಖೆಯಲ್ಲಿ ಈ ವರ್ಷ 20,950 ಕೋಟಿ ರೂ. ರಾಜಸ್ವ ಸಂಗ್ರಹದ ವಾರ್ಷಿಕ ಗುರಿ ನಿಗದಿಯಾಗಿದೆ. ಈವರೆಗೆ 16,187.95 ಕೋಟಿ ರೂ. ರಾಜಸ್ವ ಸಂಗ್ರಹ ಆಗಿದ್ದು, ಶೇ. 77.23 ರಷ್ಟು ಗುರಿ ಸಾಧನೆ ಆಗಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ 1165.33 ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದು, ಬೆಳವಣಿಗೆ ದರ ಶೇ. 7.76 ರಷ್ಟಿದೆ ಎಂದು ತಿಳಿಸಿದರು.