ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನುಮತಿ ನೀಡಿದ್ದು, ಪೊಲೀಸರು ಈ ಕಾರ್ಯಕ್ರಮಕ್ಕೆ ಅಡ್ಡಿ ಮಾಡುವಂತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇಂದು ಮಾಧ್ಯಮಗಳಿಗೆ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾಳೆ ನಡೆಯಲಿರುವ ಪದಗ್ರಹಣ ಕಾರ್ಯಕ್ರಮಕ್ಕೆ ಕೆಲವು ಕಡೆಗಳಲ್ಲಿ ಪೊಲೀಸರು ತೊಂದರೆ ನೀಡುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಮುಖ್ಯಮಂತ್ರಿಗಳೇ ಕಾರ್ಯಕ್ರಮ ಮಾಡಿಕೊಳ್ಳಿ ಎಂದು ಅನುಮತಿ ಕೊಟ್ಟಿದ್ದಾರೆ. ನಾನು ಈ ಸಂಬಂಧ ಗೃಹ ಮಂತ್ರಿಗಳು, ಪೊಲೀಸ್ ಮಹಾನಿರ್ದೇಶಕರ ಜತೆ ಮಾತನಾಡಿದ್ದೇನೆ. ಯಾರೂ ಧೃತಿಗೆಡುವ ಅಗತ್ಯವಿಲ್ಲ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಮುಖ್ಯಮಂತ್ರಿಗಳು ಹೇಳಿಕೆಯಲ್ಲಿ ಅನುಮತಿ ನೀಡಿದ್ದು, ಈ ಕಾರ್ಯಕ್ರಮಕ್ಕೆ ಲಿಖಿತ ಅನುಮತಿ ಬೇಕಿಲ್ಲ. ನಿಮ್ಮ ನಿಮ್ಮ ಪ್ರದೇಶಗಳಲ್ಲೇ ಇದ್ದು ಸುದ್ದಿ ವಾಹಿನಿಗಳಲ್ಲಿ ಬರುವ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಿ. ನಾನು ಆಮಂತ್ರಣ ನೀಡಿರುವವರನ್ನು ಬಿಟ್ಟು ಇನ್ಯಾರೂ ಇಲ್ಲಿಗೆ ಬರಬೇಡಿ. ಕಟ್ಟಡ ನಿರ್ವಹಣೆಯನ್ನು ಪೊಲೀಸರು ಹಾಗೂ ಸೇವಾದಳದವರಿಗೆ ವಹಿಸಿದ್ದು, ಅನಗತ್ಯವಾಗಿ ಬಂದು ತೊಂದರೆ ಅನುಭವಿಸುವುದು ಬೇಡ. ನಮ್ಮ ಜತೆ ನೀವು ಟಿವಿ ಹಾಗೂ ಜೂಮ್ ಆ್ಯಪ್ ಮೂಲಕ ನಿಮ್ಮ ಪ್ರದೇಶಗಳಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ತಾವೆಲ್ಲಾ ಸಹಕಾರ ನೀಡಬೇಕು ಎಂದರು.
ಎಲ್ಲಾ ಮಠ ಹಾಗೂ ಸಮುದಾಯದ ಗುರು ಹಿರಿಯರು ಆಶೀರ್ವಾದ ಮಾಡಬೇಕು ಎಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ. ಜನರು ಕೂಡ ನಾವು ನೀಡಿರುವ ಸಂಖ್ಯೆಗೆ ಮಿಸ್ ಕಾಲ್ ನೀಡಿ ಆ ಮೂಲಕ ಆಶೀರ್ವಾದ ಮಾಡಬಹುದು. ನಾವು ಇಲ್ಲಿಗೆ ಬರುವವರಿಗೆ ಪಾಸ್ ನೀಡಿದ್ದು, ನನ್ನ ಮನೆಯಿಂದ ಇಬ್ಬರು ಮಾತ್ರ ಬರುತ್ತಿದ್ದೇವೆ. ಕೆಲವು ನಾಯಕರು, ಹೊರ ರಾಜ್ಯದಿಂದ ನಾಲ್ಕೈದು ಜನ ಹಾಗೂ ಮಾಧ್ಯಮದವರಿಗೆ ಮಾತ್ರ ಪಾಸ್ ನೀಡಲಾಗಿದೆ. ಅವರು ಮಾತ್ರ ಇಲ್ಲಿಗೆ ಬರಲು ಅವಕಾಶವಿದೆ. ಹೀಗಾಗಿ ಹೆಚ್ಚಿನ ಜನ ಸೇರುವುದಿಲ್ಲ ಎಂದು ಹೇಳಿದರು.