ಬೆಂಗಳೂರು: ತುಳಿತಕ್ಕೊಳಗಾದರಿಗೆ, ಅವಕಾಶ ವಂಚಿತರಿಗೆ ನ್ಯಾಯ ಕೊಡಬೇಕು ಎನ್ನುವ ಕಾರಣಕ್ಕೆ ಕಳಕಳಿಯಿಂದ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಿಸಿದ್ದು, ಹತ್ತು ಹಲವು ಸಮುದಾಯದಲ್ಲಿ ಅವಕಾಶ ವಂಚಿತರಿದ್ದಾರೆ. ಅವರಿಗೂ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದು ಮತ್ತಷ್ಟು ಸಮಯದಾಯದ ಮೀಸಲಾತಿ ಹೆಚ್ಚಳದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಳಿವು ನೀಡಿದ್ದಾರೆ.
ಎಸ್ಸಿ ಎಸ್ಟಿ ಸಮುದಾಯದ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿರುವುದಕ್ಕೆ ಕಾರ್ಕಳ ವಿಧಾನಸಭಾ ಕ್ಷೇತ್ರದ ಎಸ್ಸಿ ಎಸ್ಟಿ ಸಮುದಾಯದ ಮುಖಂಡರು ಇಂದು ರೇಸ್ ಕೋರ್ಸ್ ರಸ್ತೆಯ ಸರ್ಕಾರಿ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಎಂ, ಎಸ್ಸಿ ಎಸ್ಟಿ ಸಮುದಾಯಕ್ಕೆ ನಾವು ಮೀಸಲಾತಿ ಹೆಚ್ಚಿಸಿದ್ದೇವೆ. ಇದು ಐತಿಹಾಸಿಕ ನಿರ್ಣಯವಾಗಿದೆ, ಕಳೆದ 50 ವರ್ಷಗಳಿಂದ ಮೀಸಲಾತಿ ಹೆಚ್ಚಿಸಬೇಕು ಎನ್ನುವ ಬೇಡಿಕೆ ಇತ್ತು.
ಹತ್ತು ಹಲವಾರು ಸರ್ಕಾರಗಳು ಬಂದು ಹೋದರೂ ಇದಕ್ಕೆ ನಿರ್ಣಯ ಕೈಗೊಳ್ಳಲು ಆಗಿರಲಿಲ್ಲ, ಇದಕ್ಕೆ ಹಲವಾರು ಕಾರಣಗಳೂ ಇವೆ. ಕಾನೂನಾತ್ಮಕ ಕಾರಣ ಇದೆ ಹಾಗಾಗಿ ಯಾರನ್ನೂ ದೂಷಿಸಲ್ಲ, ಆದರೆ ಇದಕ್ಕೆ ರಾಜಕೀಯ ಇಚ್ಛಾ ಶಕ್ತಿಯ ಅವಶ್ಯಕತೆಯೂ ಇತ್ತು ಅದನ್ನು ನಾವು ಮಾಡಿದ್ದೇವೆ. ಇದಕ್ಕೆ ಸಂಪುಟ ಸಹೋದ್ಯೋಗಿಗಳು, ಪಕ್ಷದ ಕೋರ್ ಕಮಿಟಿ, ಕಾರ್ಯಕಾರಿ ಸಮಿತಿ, ಹಿರಿಯ ನಾಯಕರ ಆಶೀರ್ವಾದ ಇತ್ತು, ಇದು ಬಿಜೆಪಿಯ ಧ್ಯೇಯ ಮತ್ತು ಬಿಜೆಪಿಯ ಬದ್ಧತೆಯಾಗಿತ್ತು ಎಂದರು.