ಬೆಂಗಳೂರು: ಅಸಂಘಟಿತ ಕಾರ್ಮಿಕರಿಗೆ ಉದ್ಯೋಗ ಭದ್ರತೆ, ಜೀವನದ ಭದ್ರತೆ, ಆರೋಗ್ಯ, ಶಿಕ್ಷಣ ಮೊದಲಾದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಅವರಿಗೆ ಜೀವನ ಭದ್ರತೆಯೊಂದಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ದೊರೆಯುವಂತಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ರಾಜ್ಯದಲ್ಲಿ ರಾಷ್ಟ್ರೀಯ ಅಸಂಘಟಿತ ಕಾರ್ಮಿಕರ ನೋಂದಣಿ ಇ - ಶ್ರಮ ಯೋಜನೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ನಂತರ ಅಸಂಘಟಿತ ಕಾರ್ಮಿಕರ ನೋಂದಣಿ ಮೊದಲ ಬಾರಿ ನಡೆಯುತ್ತಿದೆ. ಅವರನ್ನು ಗುರುತಿಸಲಾಗುತ್ತಿದೆ ಎಂದರು.
ಕೂಲಿ ಕಾರ್ಮಿಕ ಇರಲಿ, ರೈತ ಕಾರ್ಮಿಕ ಇರಲಿ, ಅವರ ಶ್ರಮಕ್ಕೆ ಪ್ರತಿಫಲ ಸಿಗಬೇಕು. ಒಂದು ದೇಶದ ಸಂಪತ್ತು ಸೃಷ್ಟಿ ಕೇವಲ ಹಣದಿಂದ ಸಾಧ್ಯವಿಲ್ಲ. ಹಣ ಬಳಕೆ ಮಾಡಿ, ಶ್ರಮ ವಹಿಸಿ, ಭೌತಿಕ ಸೌಲಭ್ಯ ಸೃಷ್ಟಿಸಬೇಕಾದರೆ ಕಾರ್ಮಿಕರೇ ಬೇಕು. ಅಸಂಘಟಿತ ಕಾರ್ಮಿಕರೇ ದೇಶದ ಶಕ್ತಿ. ಆರ್ಥಿಕತೆಯ ಪಿರಮಿಡ್ನ ತಳಹದಿ ಇವರು. ಈ ತಳಹದಿ ಭದ್ರವಾಗಿದ್ದರೆ ಮಾತ್ರ ಆರ್ಥಿಕತೆ ಉತ್ತಮವಾಗಿರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.