ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ವಿಧಾನಸೌಧ ಮುಂಭಾಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ವಿವಿಧ ಸೇವೆಗಳಿಗೆ ಚಾಲನೆ ನೀಡಿದರು.
ನಗರ ಪಾಲಿಕೆ ವತಿಯಿಂದ ವಿಧಾನಸೌಧ ಮುಂಭಾಗ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಿಎಂ, 'ಸಹಾಯ 2.0', 'ನಮ್ಮ ಬೆಂಗಳೂರು' ಅಪ್ಲಿಕೇಶನ್, ಪಿ.ಒ.ಎಸ್ ದಂಡ ವಿಧಿಸುವ ಯಂತ್ರ, ಆಂಬುಲನ್ಸ್ ವಾಹನ ಹಾಗೂ ಯಾಂತ್ರಿಕ ಕಸ ಗುಡಿಸುವ ವಾಹನಗಳಿಗೆ ಚಾಲನೆ ನೀಡಿದರು.
ಬಿಬಿಎಂಪಿಯ ವಿವಿಧ ಸೇವೆಗಳಿಗೆ ಸಿಎಂ ಚಾಲನೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಘನತ್ಯಾಜ್ಯ ವಿಭಾಗ, ಆರೋಗ್ಯ ಇಲಾಖೆ ಹಾಗೂ ಐ-ಟಿ ಇಲಾಖೆಗಳು ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದ್ದವು. ಕಾರ್ಯಕ್ರಮದಲ್ಲಿ ಸಚಿವರಾದ ಆರ್. ಅಶೋಕ್, ವಿ. ಸೋಮಣ್ಣ, ಎಸ್.ಟಿ. ಸೋಮಶೇಖರ್, ಗೋಪಾಲಯ್ಯ, ಭೈರತಿ ಬಸವರಾಜು, ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ಬಿಬಿಎಂಪಿ ಆಯುಕ್ತರು, ಪಾಲಿಕೆ ಸದಸ್ಯರು, ಮಾನ್ಯ ಉಪ ಮಹಾಪೌರರು, ಪಾಲಿಕೆ ವಿವಿಧ ಪಕ್ಷದ ಸ್ಥಾಯಿ ಸಮಿತಿ ಅಧ್ಯಕ್ಷರು ಪಾಲ್ಗೊಂಡಿದ್ದರು.
ಬಿಬಿಎಂಪಿಯ ವಿವಿಧ ಸೇವೆಗಳಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಸಿಎಂ ಬಿಎಸ್ವೈ, ಬೆಂಗಳೂರು ನಗರದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಬೆಂಗಳೂರು ಒಂದಾಗಿದೆ. ನಗರದ ಎಲ್ಲಾ ವರ್ಗದ ಜನರಿಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸಲು ಸರ್ಕಾರದ ಬದ್ಧ. ಹೊರ ವರ್ತುಲ ರಸ್ತೆಯನ್ನು 2023ಕ್ಕೆ ಪೂರ್ಣಗೊಳಿಸುತ್ತೇವೆ. 2021ರ ಡಿಸೆಂಬರ್ ವೇಳೆಗೆ ಮೆಟ್ರೋ ಎರಡನೇ ಹಂತ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. 2023ರ ವೇಳೆಗೆ 300 ಕಿ.ಮೀ ಮೆಟ್ರೋ ರೈಲು ಸಂಪರ್ಕದ ಗುರಿ ಹೊಂದಲಾಗಿದೆ. ಬೆಂಗಳೂರು ನಗರಕ್ಕಿರುವ ವಿಶೇಷ ಸ್ಥಾನಮಾನಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಬೆಂಗಳೂರು ನಗರದ ಸ್ವಚ್ಛತೆಗೆ ನಾಗರಿಕರು ಕೈಜೋಡಿಸಲು ಮನವಿ ಮಾಡುತ್ತೇನೆ ಎಂದರು.
ಇದೇ ಸಂದರ್ಭ ಬಿಬಿಎಂಪಿ ರೆಫರಲ್ ಆಸ್ಪತ್ರೆಗೆ ಆರು ಆ್ಯಂಬುಲೆನ್ಸ್, 17 ಸ್ವೀಪಿಂಗ್ ಮೆಷಿನ್ಗೆ ಚಾಲನೆ ನೀಡಿದರು. ಜೊತೆಗೆ 212 ಮಂದಿ ವಾರ್ಡ್ ಮಾರ್ಷಲ್ಗಳು ಹಾಗೂ 8 ಮಂದಿ ಮಾರ್ಷಲ್ ಮೇಲ್ವಿಚಾರಕರಿಗೆ ಸಾಂಕೇತಿಕವಾಗಿ ದಂಡ ಹಾಕುವ ಯಂತ್ರ ವಿತರಿಸಿದರು.