ಬೆಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 80 ಕೋಟಿ ರೂ. ಅಂದಾಜು ವೆಚ್ಚದ ಚಿನ್ನದ ರಥ ನಿರ್ಮಾಣಕ್ಕೆ ನಿನ್ನೆ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಆರ್.ಟಿ.ನಗರದಲ್ಲಿರುವ ರಾಜಗುರು ದ್ವಾರಕನಾಥ್ ಗುರೂಜಿ ಅವರ ಜೊತೆ ಸಮಾಲೋಚನೆ ನಡೆಸಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಚಿನ್ನದ ರಥ ತಯಾರಿಗೆ ನಿನ್ನೆ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿತ್ತು. ಹೀಗಾಗಿ ಚಿನ್ನದ ರಥ ತಯಾರಿ, ವಿನ್ಯಾಸದ ಬಗ್ಗೆ ಚರ್ಚೆ ನಡೆಸಿದ್ದು, ಚಿನ್ನದ ರಥ ತಯಾರಿಸಲು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಸಿಎಂಗೆ ಗುರೂಜಿ ಅಭಿನಂದನೆ ಸಲ್ಲಿಸಿದ್ದಾರೆ. ಸಾರ್ವಜನಿಕರ ಹಣವನ್ನು ವ್ಯಯಿಸದೆ ದೇಣಿಗೆ ಪಡೆದು ರಥ ನಿರ್ಮಿಸುವಂತೆ ರಾಜಗುರು ಸಲಹೆ ನೀಡಿದ್ದು, ರಾಜಕೀಯ ವಿಚಾರವಾಗಿಯೂ ಗುರೂಜಿ ಸಲಹೆ ನೀಡಿದ್ದಾರೆ. ಇನ್ನು ಮಂಡ್ಯ ಫಲಿತಾಂಶದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ ಎಂದು ಸಿಎಂಗೆ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.