ಬೆಂಗಳೂರು:ಗುತ್ತಿಗೆದಾರರ ಬಳಿ ಇತ್ತೀಚೆಗೆ ಸಿಕ್ಕಿದ್ದ 102 ಕೋಟಿ ಹಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಸಿಎಂ ಮತ್ತು ಡಿಸಿಎಂ ರಾಜೀನಾಮೆ ನೀಡಬೇಕು. ಈ ಹಣ ಯಾರದ್ದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಬಹಿರಂಗಪಡಿಸಲಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಅವರು ಬಂದಿದ್ದಾರೆ. ಇವರಿಬ್ಬರು ಬಂದ ತಕ್ಷಣ ಕರ್ನಾಟಕದ ಜನರು ಕಾಂಗ್ರೆಸ್ ಪಕ್ಷಕ್ಕೆ ಗುರಿ ನಿಶ್ಚಯ ಮಾಡಲು ಅವರು ಬಂದಿದ್ದಾರೆಂದು ಮಾತನಾಡುತ್ತಾರೆ. ಪಂಚರಾಜ್ಯಗಳಿಗೆ ಚುನಾವಣೆ ನಡೆಯುತ್ತಿದೆ. ಆ ಹಿನ್ನೆಲೆ ಗುರಿ ನಿಗದಿಪಡಿಸಲು ಬಂದಿರುವರು ಎಂದು ಜನರು ಮಾತನಾಡುತ್ತಿದ್ದು, ಅದಕ್ಕೆ ಕಾಂಗ್ರೆಸ್ಸಿಗರು ಉತ್ತರ ಕೊಡಬೇಕೆಂದು ಆಗ್ರಹಿಸಿದರು.
ಸಚಿವ ಸ್ಥಾನ ಸಿಗದೇ ಬೇಸರ ವ್ಯಕ್ತಪಡಿಸುವವರನ್ನು ಸಮಾಧಾನ ಪಡಿಸಲು ನಿಗಮ, ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಶಾಸಕರನ್ನು ನೇಮಿಸಲು ಈಗ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಬಂದಿದ್ದಾರೆ. ಬಹುಶಃ ನಿಗಮಗಳಿಗೆ ಇಷ್ಟು ಎಂದು ಗುರಿ ನಿರ್ಧರಿಸಲು ಬಂದಿರಬೇಕು. ಇದನ್ನು ಸ್ಪಷ್ಟಪಡಿಸಿ ಎಂದು ಸವಾಲೆಸೆದರು.
ಅವರು ಬಂದು ಹೋಗಿ ಕೆಲವೇ ದಿನಗಳಲ್ಲಿ ಇಬ್ಬರು ಗುತ್ತಿಗೆದಾರರ ಮನೆಗಳಲ್ಲಿ 102 ಕೋಟಿ ಹಣ ಸಿಕ್ಕಿತು. ಅದು ಕಾಂಗ್ರೆಸ್ಸಿನದೇ ಹಣ, ಸಿಎಂ, ಡಿಸಿಎಂ ಅವರೇ ಸಂಗ್ರಹಿಸಿದ ಹಣ, ಅದನ್ನು ಪಂಚರಾಜ್ಯಗಳ ಚುನಾವಣೆಗೆ ಸಂಗ್ರಹಿಸಿ ಕಳಿಸಲು ಇಡಲಾಗಿತ್ತು ಎಂಬುದು ಜಗಜ್ಜಾಹೀರಾಗಿದೆ. ಇವರು ಕನ್ನಡದ ಸಂಪತ್ತನ್ನು ರಕ್ಷಿಸುವುದಿಲ್ಲ. ಕನ್ನಡದ ಜಲ,ನೆಲ,ಭಾಷೆಯನ್ನು ರಕ್ಷಿಸುವುದಿಲ್ಲ. ಅದರ ಬಗ್ಗೆ ಮಾತನಾಡುವ ನೈತಿಕ ಸ್ಥೈರ್ಯ ಈ ಸರಕಾರಕ್ಕೆ ಇಲ್ಲ ಎಂದು ಟೀಕಿಸಿದರು.
ತಮಿಳುನಾಡಿಗೆ 2600 ಕ್ಯೂಸೆಕ್ ನೀರು:ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದ್ದಾರೆ. ಈಗ 2600 ಕ್ಯೂಸೆಕ್ ನೀರನ್ನು ಪ್ರತಿದಿನ ಬಿಡಲಾಗುತ್ತಿದೆ. ಸುಪ್ರೀಂ ಕೋರ್ಟ್, ಪ್ರಾಧಿಕಾರದ ಮುಂದೆ ಯಾಕೆ ನೀರು ಬಿಡಲು ಅಸಾಧ್ಯ ಎಂದು ಸಮರ್ಪಕವಾದ ಮಂಡಿಸಲು ಇವರಿಂದ ಆಗುತ್ತಿಲ್ಲ. ತಮಿಳುನಾಡಿಗೆ ಸೋಲುವುದೇ ಇವರ ಕೆಲಸ ಎಂದು ಆಕ್ಷೇಪಿಸಿದರು.