ಬೆಂಗಳೂರು:ಇಂದಿನಿಂದಎರಡು ದಿನ ಹೈದರಾಬಾದ್‌ನಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆ ನಡೆಯಲಿದೆ. ಶೋಕಾಸ್ ನೋಟಿಸ್ ಪಡೆದಿರುವ ಬಿ.ಕೆ.ಹರಿಪ್ರಾಸದ್ ಹೈದರಾಬಾದ್ ತೆರಳಿದ್ದು, ಸಿಎಂ ವಿರುದ್ಧ ಬಹಿರಂಗ ಹೇಳಿಕೆಗೆ ಇದೇ ವೇಳೆ ವರಿಷ್ಠರ ಮುಂದೆ ಸ್ಪಷ್ಟೀಕರಣ ನೀಡುವ ಸಾಧ್ಯತೆ ಇದೆ.
ಇಂದಿನಿಂದ (ಶನಿವಾರ) ಎರಡು ದಿನ ಹೈದರಾಬಾದ್‌ನಲ್ಲಿ ಉನ್ನತ ನಿರ್ಧಾರ ತೆಗೆದುಕೊಳ್ಳುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆ ನಡೆಯಲಿದೆ. ಸಮಿತಿ ಸಭೆಯಲ್ಲಿ ಪಂಚ ರಾಜ್ಯಗಳ ಚುನಾವಣೆ ಬಗ್ಗೆ ಚರ್ಚೆ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಮುಂಬರುವ ಪಂಚ ರಾಜ್ಯಗಳ ಚುನಾವಣೆಯಲ್ಲಿನ ಕಾರ್ಯತಂತ್ರಗಳ ಬಗ್ಗೆ ಸುದೀರ್ಘವಾಗಿ ಸಮಾಲೋಚನೆ ನಡೆಯಲಿದೆ.
ಬಹಿರಂಗ ಹೇಳಿಕೆ ಬಗ್ಗೆ ಚರ್ಚೆ ಸಾಧ್ಯತೆ:ಇತ್ತ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಬಿ.ಕೆ.ಹರಿಪ್ರಸಾದ್ ಸಿಎಂ ಸಿದ್ದರಾಮಯ್ಯರನ್ನು ಬಹಿರಂಗವಾಗಿ ಟೀಕೆ ಮಾಡಿರುವ ಹಿನ್ನೆಲೆ ಎಐಸಿಸಿಯಿಂದ ಶೋಕಾಸ್ ನೋಟಿಸ್ ಪಡೆದಿದ್ದಾರೆ. ಇಂದು ನಡೆಯಲಿರುವ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಈಗಾಗಲೇ ಬಿ.ಕೆ.ಹರಿಪ್ರಸಾದ್ ಹೈದರಾಬಾದ್ಗೆ ತೆರಳಿದ್ದಾರೆ. ಈ ವೇಳೆ, ಅವರು ವರಿಷ್ಠರಿಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡಿರುವ ಬಗ್ಗೆ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ. ಹೈದರಾಬಾದ್‌ನಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಖಾಯಂ ಆಹ್ವಾನಿತರಾಗಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹಾಗೂ ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿದೆ. ಇತ್ತ ಕಾಂಗ್ರೆಸ್ ಆಡಳಿತದ 4 ಸಿಎಂಗಳಿಗೆ ಸಭೆಗೆ ಆಹ್ವಾನಿಸಲಾಗಿದ್ದು, ಸಿಎಂ ಸಿದ್ದರಾಮಯ್ಯ ಕೂಡ ಹೈದರಾಬಾದ್ಗೆ ತೆರಳಲಿದ್ದಾರೆ. ಉಳಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಈಗಾಗಲೇ ಹೈದರಾಬಾದ್ಗೆ ತೆರಳಿದ್ದಾರೆ.