ಬೆಂಗಳೂರು: ಜನವರಿ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಉದ್ಯೋಗ ಮೇಳ ಆಯೋಜಿಸಲು ಉದ್ದೇಶಿಸಲಾಗಿದ್ದು, ಸಚಿವರ ತಂಡ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿಂದು ರಾಜ್ಯಮಟ್ಟದ ಉದ್ಯೋಗ ಮೇಳ ಆಯೋಜಿಸುವ ಕುರಿತು ಪೂರ್ವಭಾವಿ ಸಭೆ ನಡೆಸಿದರು. ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಐಟಿ ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಕೌಶಲ್ಯಾಭಿವೃದ್ಧಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಯುವ ಸಬಲೀಕರಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನೊಳಗೊಂಡ ಸಚಿವರ ತಂಡ ರಚಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಸಚಿವರ ಈ ತಂಡವು ಉದ್ಯೋಗದಾತರೊಂದಿಗೆ ಸಭೆ ನಡೆಸಿ, ಚರ್ಚಿಸಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಚುನಾವಣಾ ಪ್ರಣಾಳಿಕೆಯಂತೆ ಉದ್ಯೋಗ ಮೇಳ: ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಉದ್ಯೋಗ ಮೇಳ ಆಯೋಜಿಸಲಾಗುವುದು. ಕೈಗಾರಿಕೆಗಳೊಂದಿಗೆ ಚರ್ಚಿಸಿ, ಉದ್ಯೋಗಾಕಾಂಕ್ಷಿಗಳ ಕೌಶಲ್ಯ ಹಾಗೂ ಕೈಗಾರಿಕೆಗಳ ಅಗತ್ಯತೆಯ ನಡುವಿನ ಅಂತರ ಸರಿಪಡಿಸುವ ಬಗ್ಗೆ ದೂರಗಾಮಿ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆಯೂ ಶಿಫಾರಸುಗಳನ್ನು ಮಾಡುವಂತೆ ಸಚಿವರ ತಂಡಕ್ಕೆ ಸಿಎಂ ಹೇಳಿದ್ದಾರೆ.