ಬೆಂಗಳೂರು:ಮೈಸೂರು ಸ್ಯಾಂಡಲ್ ಸೋಪ್ ಎಂದಾಕ್ಷಣ ಮನಸ್ಸಿಗೆ ಮುದ ನೀಡುವ ಸುವಾಸನೆ ನೆನಪಾಗುತ್ತದೆ. ಶ್ರೀಗಂಧದ ಸುಗಂಧವನ್ನು ಜನಮನದಲ್ಲಿ ಶಾಶ್ವತವಾಗಿ ನೆಲೆಸುವಂತೆ ಮಾಡಿದ ಶ್ರೇಯಸ್ಸು ಅದಕ್ಕಿದೆ.ಈ ಸೋಪ್ ಅನ್ನು ಯಾರಿಗೂ ಪರಿಚಯಿಸುವ ಅಗತ್ಯವಿಲ್ಲ. ಈ ಬ್ರ್ಯಾಂಡ್ ನೇಮ್ ಮನೆಮನೆಗೂ ತಲುಪಿಸುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ ವತಿಯಿಂದ ಆಯೋಜಿಸಿದ್ದ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಶ್ರೀಗಂಧವನ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ, ಸಂಸ್ಥೆಯಲ್ಲಿ 10 ಸಾವಿರ ಕೋಟಿ ರೂಪಾಯಿ ವಹಿವಾಟು ಮಾಡಲು ಅವಕಾಶವಿದೆ. ಕೆಎಸ್‍ಡಿಎಲ್ ಕಾರ್ಯಚಟುವಟಿಕೆ, ಬಂಡವಾಳ, ಆಧುನಿಕ ಯಂತ್ರೋಪಕರಣ, ಆಕರ್ಷಕ ಉತ್ಪನ್ನಗಳ ತಯಾರಿಕೆ, ಮಾರುಕಟ್ಟೆ ವಿಸ್ತರಣೆಯು ದೊಡ್ಡ ಪ್ರಮಾಣದಲ್ಲಿ ಆಗಬೇಕು. ಕೆಎಸ್‍ಡಿಎಲ್‍ನ ಉತ್ಪನ್ನಗಳ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಡಿಜಿಟಲ್ ಮಾರ್ಕೆಟಿಂಗ್ ಅನ್ನು ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹೊಸ ಚಿಂತನೆಯಿಂದ ಡಿಜಿಟಲ್ ಮಾರುಕಟ್ಟೆಯಲ್ಲಿ ಮುನ್ನುಗ್ಗಬೇಕು ಎಂದು ಕರೆ ನೀಡಿದರು.
ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಶ್ರೀಗಂಧವನ ಉದ್ಘಾಟನೆ ಗುಣಮಟ್ಟದಲ್ಲಿ ರಾಜಿ ಬೇಡ:ಶ್ರೀಗಂಧ ದ್ರವ ಹಾಗೂ ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಳ್ಳಬೇಕು. ಉತ್ಪನ್ನಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಸಂಸ್ಥೆಯ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನದ ಅವಶ್ಯಕತೆಯಿದೆ. ದೊಡ್ಡ ಸಾಧನೆ ಮಾಡಲು ಸರ್ಕಾರ ಎಲ್ಲ ಬೆಂಬಲ ನೀಡಲಿದೆ. ಆಧುನಿಕ ಯುಗದ ಮಾರುಕಟ್ಟೆ ಪೈಪೋಟಿ ಎದುರಿಸಲು ತಮ್ಮ ದಕ್ಷತೆ ಹೆಚ್ಚಿಸಿಕೊಳ್ಳಬೇಕು. ಕೆಎಸ್ಡಿಎಲ್ಗೆ ಭವ್ಯವಾದ ಇತಿಹಾಸವಿದ್ದು, ಭವ್ಯ ಭವಿಷ್ಯಕ್ಕಾಗಿ ಶ್ರಮ ವಹಿಸಬೇಕಿದೆ ಎಂದು ಹೇಳಿದರು.
ರಾಜ್ಯದಲ್ಲಿ ತಯಾರಾಗುವ ಉತ್ಪನ್ನಗಳ ಬಗ್ಗೆ ನಮಗೆ ಅಭಿಮಾನವಿರಬೇಕು. ರಾಜ್ಯದಲ್ಲೇ ಸಂಶೋಧನೆಯಾಗಿ ತಯಾರಾಗಿರುವ ಈ ಉತ್ಪನ್ನ ಬ್ರ್ಯಾಂಡ್ ನೇಮ್ ಆಗಿ ಬೆಳೆದಿದ್ದರೂ, ಇದಕ್ಕೆ ಸೂಕ್ತ ಪ್ರಚಾರ ದೊರೆಯುತ್ತಿಲ್ಲ. ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ಗೆ ಉತ್ಪನ್ನಗಳ ತಯಾರಿಕೆಯಷ್ಟೇ, ಅವುಗಳ ಮಾರಾಟಕ್ಕೂ ಪ್ರಾಶಸ್ತ್ಯ ನೀಡಬೇಕು. ಸೋಪ್ ತಯಾರಿಕೆ, ವಾಣಿಜ್ಯ ಚಟುವಟಿಕೆಯಾಗಿದ್ದು, ಇದರಲ್ಲಿ ವೃತ್ತಿಪರತೆ ಇರಬೇಕು. ಕೆಎಸ್‍ಡಿಎಲ್ ಲಾಭದಾಯಕ ಸಂಸ್ಥೆಯಾಗಿದ್ದು, ಇದಕ್ಕಾಗಿ ಎಲ್ಲ ಕಾರ್ಮಿಕರಿಗೂ ಮುಖ್ಯಮಂತ್ರಿಗಳು ಅಭಿನಂದನೆ ಸಲ್ಲಿಸಿದರು.
ಧಾರವಾಡದಲ್ಲಿ ಎಫ್‍ಎಂಸಿಜಿ ಕ್ಲಸ್ಟರ್ ಸ್ಥಾಪಿಸಿ ಕೈಗಾರಿಕೆಗಳಿಗೆ ಹಲವು ಪ್ರೋತ್ಸಾಹಕಗಳನ್ನು ನೀಡಲಾಗುತ್ತಿದೆ. ಉತ್ಪಾದಕ ವೆಚ್ಚ ಹಾಗೂ ಉತ್ಪನ್ನಗಳ ಮೇಲಿನ ತೆರಿಗೆ ಕಡಿತ, ಹೀಗೆ ಅನೇಕ ಲಾಭಗಳನ್ನು ಕೆಎಸ್‍ಡಿಎಲ್ ಸಂಸ್ಥೆಯು ಎಫ್‍ಎಂಸಿಜಿ ಕ್ಲಸ್ಟರ್ನಿಂದ ಪಡೆಯಹುದು. ಬೆಂಗಳೂರಿನ ಕೆಎಸ್‍ಡಿಎಲ್‍ನ ಉತ್ಪಾದನೆಯನ್ನು ಉನ್ನತೀಕರಿಸಿ, ಎಫ್‍ಎಂಸಿಜಿಯಲ್ಲಿ ನೀಡಲಾಗುವ ಎಲ್ಲ ರಿಯಾಯತಿ ಹಾಗೂ ಪ್ರೋತ್ಸಾಹಕಗಳನ್ನು ಇಲ್ಲಿನ ಉತ್ಪನ್ನಗಳಿಗೂ ನೀಡಲು ವಿಶೇಷ ಆದೇಶ ಮಾಡಲಾಗುವುದು. ಪದ್ಮನಾಭ ಸಮಿತಿಯ ವರದಿಯಂತೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಲಾಭದಾಯಕ ಸಂಸ್ಥೆಗಳನ್ನಾಗಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಆವಿಷ್ಕಾರ ಸೂಚ್ಯಂಕದಲ್ಲಿ ಕರ್ನಾಟಕ ನಂ.1:ರಾಜ್ಯಕ್ಕೆ ವಿದೇಶಿ ಬಂಡವಾಳ ಬರುತ್ತಿದೆ. ನೀತಿ ಆಯೋಗ ಆವಿಷ್ಕಾರದಲ್ಲಿ ಕರ್ನಾಟಕ ನಂ.1 ಸ್ಥಾನ ಪಡೆದಿದೆ. 1,21,000 ಕೋಟಿ ರೂ.ಗಳ ವಿದೇಶಿ ಬಂಡವಾಳಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ತಂತ್ರಜ್ಞಾನ ಅಭಿವೃದ್ಧಿಯೊಂದಿಗೆ ಕನ್ನಡಿಗರಿಗೆ ಉದ್ಯೋಗ ದೊರೆಯಬೇಕು. ಆರ್ ಆ್ಯಂಡ್ ಡಿ, ಈಸ್ ಆಫ್ ಡೂಯಿಂಗ್ ಬಿಸಿನೆಸ್, ಎಬಿಸಿಗಳೆಲ್ಲವೂ ಅನುಷ್ಠಾನವಾಗುತ್ತಿದೆ. ಹೊಸ ಉದ್ಯೋಗ ನೀತಿಯಂತೆ, ಹೆಚ್ಚು ಉದ್ಯೋಗ ನೀಡುವ ಉದ್ಯಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಶ್ರೀಗಂಧದ ಕೃಷಿಯನ್ನು ಸರಳೀಕರಣಕ್ಕಾಗಿ ಶ್ರೀಗಂಧ ನೀತಿಯನ್ನು ಜಾರಿಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ:ಕೊಡಗು ಮೊಟ್ಟೆ ಕೇಸ್: ಸಿದ್ದರಾಮಯ್ಯಗೆ ಲಭಿಸಿತು ಝೆಡ್ ಶ್ರೇಣಿಯ ಭದ್ರತೆ