ಬೆಂಗಳೂರು: ಎಲ್ಲಾ ಸುರಕ್ಷತಾ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಸಹಕರಿಸಿ ಎಂದು ರಾಜ್ಯದ ಸಮಸ್ತ ನಾಗರಿಕರಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಕೋವಿಡ್ ಸಾಂಕ್ರಾಮಿಕ ಪ್ರಕರಣಗಳ ಸಂಖ್ಯೆ ಮತ್ತೆ ತೀವ್ರವಾಗುತ್ತಿದೆ. ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ನಾಗರಿಕರ ಸಹಕಾರವಿಲ್ಲದೆ ಇದು ಯಶಸ್ವಿಯಾಗುವುದಿಲ್ಲ. ಹಾಗಾಗಿ ಮಾಸ್ಕ್ ಧಾರಣೆ, ಸ್ವಚ್ಛತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ನಮ್ಮ ಜೀವನಕ್ರಮವಾಗಲಿ. ಈ ಮುನ್ನೆಚ್ಚರಿಕೆಯ ಕ್ರಮಗಳ ನಿರ್ಲಕ್ಷ್ಯ ಮಾಡದಂತೆ ಮಾಧ್ಯಮ ಪ್ರಕಟಣೆ ಮೂಲಕ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಇದನ್ನೂ ಓದಿ: 'ಕುಟುಂಬ ವ್ಯಾಮೋಹಕ್ಕೆ ಬಲಿಯಾಗಬೇಡಿ, ಬ್ಯಾಂಡ್ ಸೆಟ್ ನಾಯಕರನ್ನು ದೂರವಿಡಿ'
ಹಿರಿಯ ನಾಗರಿಕರು, ಇತರ ಆರೋಗ್ಯ ಸಮಸ್ಯೆಯುಳ್ಳ 45 ರಿಂದ 60 ವರ್ಷದೊಳಗಿನ ವ್ಯಕ್ತಿಗಳು ತಪ್ಪದೇ ಲಸಿಕೆ ಪಡೆದುಕೊಂಡು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಮುನ್ನೆಚ್ಚರಿಕೆ ಕ್ರಮಗಳ ಪಾಲನೆಯನ್ನು ನಿರಂತರವಾಗಿ ಮುಂದುವರೆಸಿ. ಸಾರ್ವಜನಿಕ ಸ್ಥಳಗಳಲ್ಲಿ ಈ ಕ್ರಮಗಳನ್ನು ತಪ್ಪದೇ ಪಾಲಿಸುವ ಮೂಲಕ ನಮ್ಮ ಜವಾಬ್ದಾರಿಯನ್ನು ನಿರ್ವಹಿಸೋಣ, ಕೋವಿಡ್-19 ನಿಯಂತ್ರಿಸೋಣ ಎಂದು ಜನತೆಗೆ ಸಿಎಂ ಕರೆ ನೀಡಿದ್ದಾರೆ.
ಜೀವ-ಜೀವನೋಪಾಯಗಳ ಸಮತೋಲನ ಕಾಪಾಡುವ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿರ್ವಹಿಸೋಣ, ಮುನ್ನೆಚ್ಚರಿಕೆಯೊಂದಿಗೆ ಮುನ್ನಡೆಯೋಣ.ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರದ ಜೊತೆ ನಾಗರಿಕರು ಕೈಜೋಡಿಸಿ ಎಂದು ಮನವಿ ಮಾಡಿದ್ದಾರೆ.